ಕೂಬಿಂಗ್ ಕಾರ್ಯಚರಣೆ ಚುರುಕುಗೊಳಿಸಿ

001
Published on

ಗೋಣಿಕೊಪ್ಪ: ಹುಲಿ ಸಂಚಾರದ ಪ್ರದೇಶದಲ್ಲಿ ಕೂಬಿಂಗ್ ಕಾರ್ಯಚರಣೆ ಚುರುಕುಗೊಳಿಸುವಂತೆ ರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.


ಕಳೆದ ಮೂರು ದಿನಗಳ ಹಿಂದೆ ಪೊನ್ನಂಪೇಟೆ ತಾಲೂಕಿನ ಬಲ್ಯಮುಂಡೂರು ಗ್ರಾಮದ ದೇಯಂಡ ಪೂಣಚ್ಚ ಅವರ ಗಬ್ಬದ ಹಸುವನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು. ವಿಷಯ ತಿಳಿದು ಶನಿವಾರ ದೂರವಾಣಿ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದ ಪೊನ್ನಣ್ಣ, ಹುಲಿ ದಾಳಿಯಿಂದ ಹಸು ಕಳೆದುಕೊಂಡ ಕುಟುಂಬಕ್ಕೆ ಕೂಡಲೇ ಪರಿಹಾರ ಒದಗಿಸುವಂತೆ ಅರಣ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಲ್ಲದೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿ ಸಂಚಾರ ಹಿನ್ನೆಲೆಯಲ್ಲಿ ಕೂಬಿಂಗ್ ಕಾರ್ಯಚರಣೆ ಚುರುಕುಗೊಳಿಸಬೇಕು. ಈ ಭಾಗದಲ್ಲಿ ಹುಲಿ ಸಂಚಾರ ಇರುವುದರಿಂದ ಧ್ವನಿವರ್ಧಕದ ಮೂಲಕ ಗ್ರಾಮೀಣ ಜನರಿಗೆ ಮಾಹಿತಿ ತಲುಪಿಸಬೇಕು ಎಂದು ತಾಕೀತು ಮಾಡಿದರು.


ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿಗಳು, ಕಳೆದ ಮೂರು ದಿನಗಳ ಹಿಂದೆ ಈ ಭಾಗದಲ್ಲಿ ಹುಲಿಯ ಸಂಚಾರ ಕಂಡು ಬಂದಿತ್ತು. ಸ್ಥಳದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹುಲಿಯ ಚಲನವಲನದ ಬಗ್ಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಗವಹಿಸಲಾಗುತ್ತಿದೆ. ಗ್ರಾಮಸ್ಥರಿಗೆ ಹುಲಿ ಸಂಚಾರದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ ಬಲ್ಯಮುಂಡೂರು ಗ್ರಾಮಕ್ಕೆ ಭೇಟಿ ನೀಡಿ, ಹುಲಿ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದರು. ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಬಲ್ಯಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಕೊಟ್ಟಂಗಡ ಕಾರ್ಯಪ್ಪ, ಪ್ರಮುಖರಾದ ಕೊಟ್ಟಂಗಡ ನಾಣಯ್ಯ ಡಿಕ್ಕಿ, ಕೊಟ್ಟಂಗಡ ಮಧು, ದೇಯಂಡ ಕಾಶಿ, ಸಂತೋಷ್, ಹಸುವನ್ನು ಕಳೆದುಕೊಂಡ ಪೂಣಚ್ಚ ಸೇರಿದಂತೆ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net