

ಗುಂಡ್ಲುಪೇಟೆ: ಸಕಾಲದಲ್ಲಿ ಸಾರ್ವಜನಿಕರ ಕೆಲಸವನ್ನು ಮಾಡಿಕೊಡುತ್ತಿಲ್ಲ ಎಂದು ಆರೋಪಿಸಿ ತಾಲೂಕಿನ ಕೂತನೂರು ಗ್ರಾಮ ಪಂಚಾಯಿತಿ ಸದಸ್ಯರು ಪಿಡಿಒ ವಿರುದ್ಧ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಶೆಟ್ಟಿ ನೇತೃತ್ವದಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿ ಕಚೇರಿ ಎದುರು ಜಮಾಯಿಸಿದ ಸದಸ್ಯರು, ಪಿಡಿಒ ವಿಜಯಕುಮಾರ್ ದೀವಟಿಗೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿಂದುಳಿದ ವರ್ಗಗಳ ಜನರೇ ನೆಲೆಸಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರು ಹಾಗೂ ಸ್ವಚ್ಛತೆ ಸಮಸ್ಯೆಯಾಗುತ್ತಿದೆ. ಕೇಳಿದಷ್ಟು ಹಣ ಕೊಟ್ಟವಾರಿಗೆ ಮಾತ್ರ ಇ-ಸ್ವತ್ತು ಮಾಡಿಕೊಡಲಾಗುತ್ತಿದೆ. ಅಲ್ಲದೆ ಗ್ರಾಮ ಪಂಚಾಯಿತಿ ವತಿಯಿಂದ ಮಾಡಿದ ಕಾಮಗಾರಿಗಳ ವಿವರಗಳಿರುವ ಎಂಬಿ ಪುಸ್ತಕವನ್ನು ಮುಚ್ಚಿಟ್ಟಿದ್ದಾರೆ. ಆದ್ದರಿಂದ ಕೂಡಲೇ ಅಧಿಕಾರಿಗಳನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಪಂಚಾಯಿತಿ ಇಒ ಶ್ರೀಕಂಠರಾಜೇ ಅರಸು ಅವರಿಗೆ ಮನವಿ ಸಲ್ಲಿಸಿದರು.