

ಮೈಸೂರು: ಧರ್ಮ ಹಾಗೂ ಸಂಸ್ಕೃತಿ ಉಳಿಸಿ, ಬೆಳೆಸಿದಾಗ ಸದೃಢ ಭಾರತ ನಿರ್ಮಾಣ ಸಾಧ್ಯ ಎಂದು ಉಡುಪಿ ಪೇಜಾವರ ಮಠದ ಶ್ರೀವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಸರಸ್ವತಿಪುರಂನಲ್ಲಿರುವ ಶ್ರೀಕೃಷ್ಣಧಾಮದಲ್ಲಿ ಆಯೋಜಿಸಿರುವ ಚಾರ್ತುಮಾಸ ಕಾರ್ಯಕ್ರಮದಲ್ಲಿ ಶುಕ್ರವಾರ ಚಾಮರಾಜನಗರದ ಕೂಡ್ಲೂರು ಗ್ರಾಮದ ಸ್ಥಳ ಪುರೋಹಿತರಾಗಿದ್ದ ಗುಂಡಪ್ಪ ಅವರ ಹೆಸರಿನಲ್ಲಿ ಸ್ಥಾಪಿಸಿರುವ ‘ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನ’ಕ್ಕೆ ಚಾಲನೆ ನೀಡಿ ಮಾತನಾಡಿದರು.
ಶ್ರದ್ಧೆ ಹಾಗೂ ಭಕ್ತಿ ಭಾವದಿಂದ ಪ್ರಭುವಿನ ಧ್ಯಾನ ಮಾಡಿದರೆ ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ಭಿಸುತ್ತದೆ. ಪ್ರತಿಯೊಬ್ಬರಿಗೂ ದೇವರಲ್ಲಿ ಭಕ್ತಿ, ನಂಬಿಕೆ, ನಿಷ್ಠೆ ಇರಬೇಕು. ಧರ್ಮ ಹಾಗೂ ಸಂಸ್ಕೃತಿ ಉಳಿಸಿ, ಬೆಳೆಸಬೇಕು. ಇದರಿಂದ ಸದೃಢ ಭಾರತ ನಿರ್ಮಾಣ ಸಾಧ್ಯ ಎಂದರು.
ಪ್ರತಿಷ್ಠಾನದ ಸಂಸ್ಥಾಪಕ ಕೆ.ಆರ್.ಗಣೇಶ್ ಮಾತನಾಡಿ, ವಿದ್ಯಾಸ್ಪಂದನ ಸಂಸ್ಥೆಯು ಸಾರ್ವಜನಿಕವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಬ್ರಾಹ್ಮಣರಿಗೆ ಪ್ರತ್ಯೇಕವಾಗಿ ಸಹಾಯ ಮಾಡುವ ಉದ್ದೇಶದಿಂದ ಚಾಮರಾಜನಗರದ ಕೂಡ್ಲೂರು ಗ್ರಾಮದ ಸ್ಥಳ ಪುರೋಹಿತರಾಗಿದ್ದ ನಮ್ಮ ತಂದೆ ಗುಂಡಪ್ಪ ಅವರ ಹೆಸರಲ್ಲಿ ಪ್ರತಿಷ್ಠಾನ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಅಲ್ಲದೇ ಧಾರ್ಮಿಕ ಚಟುವಟಿಕೆಗಳು ಹಾಗೂ ಸಂಸ್ಕಾರ ವಿಚಾರ ಜಾಗೃತಿ ಮಾಡುವ ಉದ್ದೇಶದ ಸಣ್ಣ ಪ್ರಯತ್ನವನ್ನು ಸಹ ಮಾಡಲಾಗುವುದು. ಸಂಧ್ಯಾವಂದನೆಯ ಜಾಗೃತಿ ಹಾಗೂ ತರಬೇತಿ ಮಾಡಲು ಉದ್ದೇಶಿಸಲಾಗಿದೆ ಎಂದರು
ಕುಟುಂಬಸ್ಥರು ಸೇರಿದಂತೆ ಸರಸ್ವತಿ, ಜಿ.ಪುನೀತ್ ಕೂಡ್ಲೂರು, ಶುಭಾ ಅರುಣ್, ನಾಗರಾಜ್, ವಿಕ್ರಂ ಅಯ್ಯಂಗಾರ್ ಇತರರು ಇದ್ದರು.