ಕೂಡ್ಲೂರಿನಲ್ಲಿ ಭತ್ತ, ರಾಗಿ ಖರೀದಿ ಆರಂಭ

11Kush02
Published on

ಕುಶಾಲನಗರ: ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ವತಿಯಿಂದ 2022-23 ನೇ ಸಾಲಿನ ಮುಂಗಾರು ಋತುವಿನಲ್ಲಿ ಜಿಲ್ಲೆಯ ರೈತರು ಬೆಳೆದ ಭತ್ತ ಹಾಗೂ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕಿನ ವ್ಯಾಪ್ತಿಯ ರೈತರಿಗೆ ಅನುಕೂಲವಾಗುವಂತೆ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಕೇಂದ್ರ ವ್ಯಾಪ್ತಿಯ ಕರ್ನಾಟಕ ರಾಜ್ಯ ಉಗ್ರಾಣ ಕೇಂದ್ರದ ಆವರಣದಲ್ಲಿ ಭತ್ತ ಮತ್ತು ರಾಗಿ ಖರೀದಿ ಕೇಂದ್ರ ತೆರೆಯಲಾಗಿದೆ.


ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಕಾರ್ಯಪಡೆಯ ತೀರ್ಮಾನದಂತೆ ಜನವರಿ 1ರಿಂದ ಭತ್ತ ಖರೀದಿ ನೋಂದಣಿ ಕಾರ್ಯ, ಕುಶಾಲನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣ ಮತ್ತು ಸೋಮವಾರಪೇಟೆ ಕೃಷಿ ಉತ್ಪನ್ನ ಉಪ ಪ್ರಾಂಗಣದ ಆವರಣದಲ್ಲಿ ನಡೆದಿತ್ತು. ಅದರಂತೆ ಕುಶಾಲನಗರ ತಾಲೂಕಿನಿಂದ 74 ರೈತರು , ಸೋಮವಾರಪೇಟೆ ತಾಲೂಕಿನಿಂದ 99 ರೈತರು ನೋಂದಣಿ ಮಾಡಿಕೊಂಡಿದ್ದರು. ರೈತರು ಭತ್ತ ಬೆಳೆಯ ಕಟ್ಟಾವು ಮಾಡಿ ಭತ್ತವನ್ನು ಕಣದಲ್ಲಿ ಸಿದ್ಧತೆ ಮಾಡಿ ನಂತರ ಕೃಷಿ ಮಾರಾಟ ಮಂಡಳಿಯವರು ನೀಡಿದ ಚೀಲಗಳಲ್ಲಿ ಭತ್ತವನ್ನು ತುಂಬಿಸಿಕೊಂಡು ತಂದು ಉಗ್ರಾಣ ಕೇಂದ್ರದಲ್ಲಿ ಹಾಕುವ ಕೆಲಸವನ್ನು ಆರಂಭ ಮಾಡಿದ್ದಾರೆ.


ಈಗಾಗಲೇ ಕೂಡ್ಲೂರು ಕೈಗಾರಿಕಾ ಕೇಂದ್ರದ ಕೃಷಿ ಉಗ್ರಾಣ ಕೇಂದ್ರದ ಆವರಣದಲ್ಲಿ ಆರಂಭಗೊಂಡಿರುವ ಭತ್ತ ಖರೀದಿ ಕೇಂದ್ರದ ಆವರಣದಲ್ಲಿ ಕುಶಾಲನಗರ ತಾಲೂಕಿನ ನೋಂದಣಿಯ 74 ರೈತರ ಪೈಕಿ 35 ರೈತರಿಂದ 786 ಕ್ವಿಂಟಾಲ್ ಭತ್ತ ಖರೀದಿಸಲಾಗಿದೆ.
ಸೋಮವಾರಪೇಟೆ ತಾಲೂಕಿನಲ್ಲಿ 99 ರೈತರಲ್ಲಿ 34 ರೈತರಿಂದ 1,118 ಕ್ವಿಂಟಾಲ್ ಭತ್ತ ಖರೀದಿಸಲಾಗಿದೆ. ಸರ್ಕಾರವು ಭತ್ತಕ್ಕೆ ಬೆಂಬಲ ಬೆಲೆಯಾಗಿ ಸಾಮಾನ್ಯ ಭತ್ತಕ್ಕೆ 2,040.ರೂ, ಗ್ರೇಡ್ ಎ ಭತ್ತಕ್ಕೆ 2,060 ರೂ.ನೋಂದಣಿ ಮಾಡಿದ್ದಾರೆ. ರಾಗಿಗೆ 3,578 ರೂ. ಬೆಂಬಲ ಬೆಲೆ ನಿಗದಿಯಾಗಿದೆ. ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಬೆಂಗಳೂರು, ಖರೀದಿಯ ಏಜೆನ್ಸಿಯಾಗಿದು,್ದ ಖರೀದಿಯ ಅವಧಿಯು 31-3-2023 ರವರೆಗೆ ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಖರೀದಿ ಅಧಿಕಾರಿ ಸೋಮಯ್ಯ ತಿಳಿಸಿದ್ದಾರೆ.

ಉಗ್ರಾಣ ಕೇಂದ್ರದಲ್ಲಿ ಭತ್ತದ ಖರೀದಿ ಕೇಂದ್ರದ ಉದ್ಘಾಟನೆ ಸಂದರ್ಭ ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ರವಿಕುಮಾರ್, ಕುಶಾಲನಗರ ಖರೀದಿ ಕೇಂದ್ರದ ಅಧಿಕಾರಿ ರಾಜುತಿಪ್ಪೆ ಶೆಟ್ಟಿ, ಸೋಮವಾರಪೇಟೆ ಕೇಂದ್ರದ ಅಧಿಕಾರಿ ಮಂಜುನಾಥ ಒಡೆಯರ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net