ಕೂಡ್ಲಿಮಠದ ಆಸ್ತಿ ಸಂರಕ್ಷಣೆ ಮಾಡಿ; ವಾಮಮಾರ್ಗದಿಂದ ಜಮೀನು ಕಬಳಿಕೆ ಕುತಂತ್ರ

WEB SGRRRRR
Published on

ಸಾಗರ: ತಾಳಗುಪ್ಪ ಕೂಡ್ಲಿಮಠದ ಆಸ್ತಿ ಸಂರಕ್ಷಣೆ ಮಾಡುವಂತೆ ಹಾಗೂ ಸುಳ್ಳು ಹೋರಾಟ ನಡೆಸಿ ಅನಗತ್ಯ ಗೊಂದಲ ಉಂಟು ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಾಗರ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಶುಕ್ರವಾರ ಕೂಡ್ಲಿಮಠ ಹಿತರಕ್ಷಣಾ ಸಮಿತಿ ಪ್ರಮುಖರು ಪ್ರತಿಭಟನೆ ನಡೆಸಿದರು.

ಸಮಿತಿಯ ಪ್ರಮುಖ ಜಗದೀಶ್ ಒಡೆಯರ್ ಮಾತನಾಡಿ, ವೀರಶೈವ ಸಮಾಜ ಯಾವತ್ತೂ ಯಾವ ಜನಾಂಗದವರಿಗೂ ತೊಂದರೆ ಕೊಟ್ಟಿಲ್ಲ. ಕೂಡ್ಲಿಮಠದ ವಿರುದ್ಧ ಕೆಲವರು ಕೇವಲವಾಗಿ ಮಾತನಾಡುತ್ತಿರುವುದು ಬೇಸರ ತರಿಸಿದೆ ಎಂದು ಹೇಳಿದರು.

ಮಠದ ಜಾಗವನ್ನು ಅಭಿವೃದ್ಧಿಪಡಿಸಲು ಮುಂದಾದಾಗ ಶ್ರೀಗಳನ್ನೇ ತಪ್ಪಿತಸ್ಥರನ್ನಾಗಿ ಮಾಡುತ್ತಿರುವುದು, ಗೂಂಡಾವರ್ತನೆ ತೋರಿಸಿ, ಕಿರುಕುಳ ನೀಡುವುದು ಸರಿಯಲ್ಲ. ಸೌಹಾರ್ದತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಲು ಅನೇಕ ಅವಕಾಶ ಇದೆ. ಅನಗತ್ಯವಾಗಿ ಕೂಡ್ಲಿಮಠಕ್ಕೆ ತೊಂದರೆ ಕೊಟ್ಟರೆ ಹೋರಾಟವನ್ನು ಇನ್ನಷ್ಟು ಉಗ್ರಗೊಳಿಸಬೇಕಾಗುತ್ತದೆ. ಕೂಡ್ಲಿ ಮಠ ಬಹುಹಿಂದಿನಿಂದಲೂ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಚಿಂತನೆ ನಡೆಸುತ್ತಿದೆ. ಹಿನ್ನೀರಿನಲ್ಲಿ ಮುಳುಗಡೆಯಾದ ಮಠಕ್ಕೆ ಮತ್ತೆ ಜೀವ ತುಂಬುವ ಪ್ರಯತ್ನ ಭಕ್ತರು ಮತ್ತು ಶ್ರೀಗಳಿಂದ ನಡೆದಿದೆ. ಇದಕ್ಕೆ ಬಣ್ಣಹಚ್ಚುವ ಕೆಲಸ ಮಾಡಬೇಡಿ ಎಂದು ಹೇಳಿದರು.

ಆಪ್ಸ್‌ಕೋಸ್ ನಿರ್ದೇಶಕ ಬಿ.ಎ.ಇಂದೂಧರ ಗೌಡ ಮಾತನಾಡಿ, ಕೂಡ್ಲಿಮಠಕ್ಕೆ ಎರಡು ಶತಮಾನಗಳ ಇತಿಹಾಸವಿದೆ. ಕೂಡ್ಲಿಮಠ ಸ್ವಾಮೀಜಿಯನ್ನು ಅನಗತ್ಯವಾಗಿ ನಿಂದಿಸುವುದನ್ನು ಸಮಾಜ ಎಂದಿಗೂ ಸಹಿಸುವುದಿಲ್ಲ. ಕಾನೂನು ಹೋರಾಟದ ಮೂಲಕ ದಕ್ಕಿಸಿಕೊಳ್ಳಲು ಸಾಧ್ಯವಿಲ್ಲವೆಂದು ವಾಮಮಾರ್ಗದಿಂದ ಜಮೀನು ಕಬಳಿಸುವ ತಂತ್ರ ಕೆಲವರು ಮಾಡುತ್ತಿದ್ದಾರೆ. ಕೂಡ್ಲಿಮಠಕ್ಕೆ ಮತ್ತು ಸ್ವಾಮಿಗಳಿಗೆ ತೊಂದರೆ ಕೊಡುತ್ತಿರುವವರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸಬೇಕು ಎಂದು ಹೇಳಿದರು.

ವಕೀಲ ಕೆ.ವಿ.ಪ್ರವೀಣ್ ಮಾತನಾಡಿ, ತಾಳಗ್ಪುಪ ಕೂಡ್ಲಿ ಮಠದ ವಿರುದ್ಧ ಕೆಲವರು ಸುಳ್ಳು ಆರೋಪ ಮಾಡಿ ಹೋರಾಟ ನಡೆಸಿದ್ದು ಶ್ರೀಮಠ ಯಾವತ್ತೂ ಯಾವ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಿಲ್ಲ. ರೈತರಿಗೆ ಸಾಕಷ್ಟು ಜಮೀನನ್ನು ಬಿಟ್ಟುಕೊಟ್ಟಿದೆ ಎಂದು ಹೇಳಿದರು.

ಶರಾವತಿ ಹಿನ್ನೀರಿನ ಹಿರೇಭಾಸ್ಕರ ಯೋಜನೆ ಸಂದರ್ಭದಲ್ಲಿ ಕೂಡ್ಲಿಮಠ ಮುಳುಗಡೆಯಾಗಿದ್ದು ತಾಳಗುಪ್ಪದಲ್ಲಿ ಹಣ ಕೊಟ್ಟು ಜಾಗ ಖರೀದಿ ಮಾಡಿ ಮಠವನ್ನು ನಿರ್ಮಾಣ ಮಾಡಲಾಗಿದೆ. ಭೂಸುಧಾರಣೆ ಕಾಯ್ದೆ ಜಾರಿಗೆ ಬಂದಾಗ ಮಠದ ನೂರಾರು ಎಕರೆ ಜಮೀನು ಗೇಣಿದಾರರಿಗೆ ನೀಡಲಾಗಿದೆ. ಉಳಿದುಕೊಂಡಿರುವ ಅಲ್ಪಸ್ವಲ್ಪ ಜಮೀನು ರಕ್ಷಣೆ ಮಾಡಲು ಶ್ರೀಗಳು ಬೇಲಿ ಹಾಕಲು ಹೋಗಿದ್ದಾಗ ಕೆಲವರು ಅನಗತ್ಯ ವಿವಾದ ಸೃಷ್ಟಿಸಿದ್ದಾರೆ. ಮಠದ ಆಸ್ತಿಯನ್ನು ಕಬಳಿಸಲು ಕೆಲವರು ಸಂಚು ಮಾಡುತ್ತಿದ್ದಾರೆ ಎಂದು ದೂರಿದರು.

ಮಠದ ಆಸ್ತಿಗೆ ಸೂಕ್ತ ರಕ್ಷಣೆ ನೀಡುವ ಜತೆಗೆ ಅನಗತ್ಯವಾಗಿ ವಿವಾದ ಸೃಷ್ಟಿ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net