

ಕೂಡ್ಲಿಗಿ: ದೇವಸ್ಥಾನದಲ್ಲಿ ಘಟ ಸ್ಥಾಪನೆ ಹಾಗೂ ತೇರು ಗಾಲಿ ಹೊರ ತರುವುದರೊಂದಿಗೆ ಪಟ್ಟಣದ ಅಧಿದೇವತೆ ಊರಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ವಿಧ್ಯುಕ್ತ ಚಾಲನೆ ನೀಡಲಾಯಿತು.
ಮಧ್ಯಾಹ್ನ ಪಟ್ಟಣದ ದೈವಸ್ಥರು ಕುಂಬಾರ ಮನೆಗೆ ಹೋಗಿ ಘಟ ತಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿ ಸ್ಥಾಪನೆ ಮಾಡಿದರು. ಬಳಿಕ ಕೊತ್ತಲಾಂಜನೇಯ ದೇವಸ್ಥಾನದ ಬಳಿಯಿದ್ದ ತೇರುಗಡ್ಡೆಯನ್ನು ಲಕ್ಷ್ಮೀ ಬಜಾರ್ಗೆ ತಂದು ನಿಲ್ಲಿಸಿದರು. ನಂತರ ದೇವಸ್ಥಾನದಲ್ಲಿ ಘಟಕ್ಕೆ ದೀಪಾರಾಧನೆ, ಮಹಾ ಮಂಗಳಾರತಿ ಮಾಡಲಾಯಿತು. ಮಾತಂಗಿಯರಿಗೆ ಧಾನ್ಯದ ನಿಧಿ ಹಾಗೂ ಉಡಿ ತುಂಬಲಾಯಿತು. ಮೇ 19ರಿಂದ ಜಾತ್ರೆಯ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, 22ರಂದು ರಥೋತ್ಸವ ನಡೆಯಲಿದೆ.