

ತಾಳಗುಪ್ಪ: ಮಠ ಮಾನ್ಯಗಳು ಆರ್ತರ ರಕ್ಷಕರಾಗಿರಬೇಕು ಎಂದು ಸಾಮಾಜಿಕ ಹೋರಾಟಗಾರ ವಸಂತ ನಾಯ್ಕ ಮನಮನೆ ಹೇಳಿದರು.
ಕೂಡ್ಲಿ ಸಂಸ್ಥಾನ ಮಠದ ಅತಿರೇಕ ವರ್ತನೆ ಖಂಡಿಸಿ ತಾಳಗುಪ್ಪದಿಂದ ಸಾಗರವರೆಗೆ ಡಾ.ಎಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘ ಸೋಮವಾರ ಆಯೋಜಿಸಿದ್ದ ನ್ಯಾಯದ ನಡಿಗೆಗೆ ಚಾಲನೆ ನೀಡಿ ಮಾತನಾಡಿ, ಕೂಡ್ಲಿ ಮಠದ ಸ್ವಾಮೀಜಿ ಅವರು ಔದಾರ್ಯದಿಂದ, ಮಾನವೀಯತೆಯಿಂದ ವ್ಯವಹರಿಸಲಿ ಎಂದು ಮನವಿ ಮಾಡಿದರು.
ಮಡಿವಾಳ, ಒಕ್ಕಲಿಗ ಜನಾಂಗದವರು ಮೂರು ತಲೆಮಾರಿನಿಂದ ಮನೆಕಟ್ಟಿಕೊಂಡ ಸ್ಥಳವನ್ನು ತಮ್ಮ ಹಕ್ಕಿನ ಜಾಗ ಎಂದು ಪ್ರತಿಪಾದಿಸಿ ಅಮಾನವೀಯವಾಗಿ ತೆರವುಗೊಳಿಸಲು ಯತ್ನಿಸಿರುವುದು ಖಂಡನೀಯ. ಈಗಲೂ ಕಾಲಮಿಂಚಿಲ್ಲ. ಸ್ವಾಮೀಜಿಯವರು ಸಮಾಜದ ಗಣ್ಯರ, ಶೋಷಿತರ ಮಧ್ಯೆ ಸಮಾಲೋಚನೆ ನಡೆಸಿ ಸಮಸ್ಯೆಯನ್ನು ಬಗೆಹರಿಸಬೇಕು. ಜಾತಿ ಸಂಘರ್ಷಕ್ಕೆ ಕಾರಣವಾಗುವ ಸನ್ನಿವೇಶಕ್ಕೆ ಕೊನೆ ಹಾಡಬೇಕು ಎಂದು ಕೋರಿದರು.
ರೈತ ಮುಖಂಡ ವೀರಭದ್ರ ನಾಯ್ಕ ಮಾತನಾಡಿ, ಅಂದಿನ ಚನ್ನಬಸವೇಶ್ವರ ಸ್ವಾಮೀಜಿಯವರ ಕಾಲದಲ್ಲಿ ಲಿಂಗನಮಕ್ಕಿ ಜಲಾಶಯದಲ್ಲಿ ಮುಳುಗಿದ ಮಠ ತಾಳಗುಪ್ಪದಲ್ಲಿ ಸ್ಥಾಪನೆಯಾಗಲು ಮಡಿವಾಳ ಸಮಾಜದವರೇ ಮುಖ್ಯ ಕಾರಣ. ಮುಳುಗಡೆಯಾದರೆ ಮಠ ಕಟ್ಟಲು ಸ್ಥಳವಿಲ್ಲ ಎಂಬ ಸ್ವಾಮೀಜಿಯವರ ಕೊರಗಿಗೆ ಧ್ವನಿಯಾಗಿ ಮಡಿವಾಳರ ಕರಡಿ ಗುತ್ಯಪ್ಪ ಇಂದಿನ ದರದಲ್ಲಿ ಕೋಟ್ಯಂತರ ರೂ. ಬೆಲೆಬಾಳುವಂತ 5 ಎಕರೆ ಸ್ಥಳ ದಾನ ಮಾಡಿ ಧರ್ಮಶಾಸನ ಸ್ಥಾಪಿಸಬೇಕು ಎಂದು ದಾನಪತ್ರ ಮಾಡಿಕೊಟ್ಟಿದ್ದರು. ಇದನ್ನು ಮರೆತು ಆ ಸಮಾಜದ ಕಡು ಬಡವರ ಮೇಲೆ ದೌರ್ಜನ್ಯ ಎಸೆಗುವುದು ಧರ್ಮ ಪೀಠದಲ್ಲಿ ಕೂತವರಿಗೆ ಶೋಭಿಸುವುದಿಲ್ಲ ಎಂದು ಹೇಳಿದರು.
ರೈತ ಸಂಘದ ಅಧ್ಯಕ್ಷ ದಿನೇಶ ಶಿರವಾಳ ಮಾತನಾಡಿ, ನಮ್ಮ ಹೋರಾಟ ಮಠದ ವಿರುದ್ಧವಾಗಲಿ, ವೀರಶೈವ ಸಮಾಜದ ವಿರುದ್ಧವಾಗಲಿ ಅಲ್ಲ. ಶೋಷಿತರಿಗೆ ನ್ಯಾಯ ದೊರಕಿಸುವುದಷ್ಟೇ ನಮ್ಮ ಗುರಿಯಾಗಿದೆ ಎಂದು ಹೇಳಿದರು. ಇದಕ್ಕೂ ಮುನ್ನ ಹೋರಾಟಗಾರರು ವೀರಭದ್ರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನ್ಯಾಯಕ್ಕಾಗಿ ಪ್ರಾರ್ಥಿಸಿದರು. ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. .