

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ಮಲಪ್ರಭಾ ನದಿಯಲ್ಲಿ ನೀರಾವರಿ ಇಲಾಖೆಯಡಿ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿ ಅಕ್ರಮ ಮರಳು (ಉಸುಕು) ದಂಧೆಕೋರರಿಗೆ ವರದಾನವಾಗಿ ಪರಿಣಮಿಸಿದೆ.
ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕಾಗಿ ನದಿಯಲ್ಲಿ ಗುಂಡಿಗಳನ್ನು ಅಗೆಯಲಾಗುತ್ತಿದ್ದು, ಅದರಿಂದ ಸಂಗ್ರಹಗೊಳ್ಳುವ ಅಪಾರ ಪ್ರಮಾಣದ ಮರಳನ್ನು ಬದಿಯಲ್ಲಿ ಗುಡ್ಡೆ ಹಾಕಲಾಗುತ್ತಿದೆ. ಆ ಮರಳಿನ ಮೇಲೆ ಅಕ್ರಮ ಮರಳು ದಂಧೆಕೋರರ ಕೆಂಗಣ್ಣು ಬಿದ್ದಿದ್ದು, ತಡರಾತ್ರಿ ಸಾಗಿಸುತ್ತಿದ್ದಾರೆಂಬ ಗಂಭೀರ ಆರೋಪಗಳು ಕೇಳಿ ಬಂದಿವೆ. ಅದಕ್ಕೆ ಸಾಕ್ಷಿ ಎಂಬಂತೆ ಗುಡ್ಡೆ ಹಾಕಿರುವ ಮರಳಿನ ರಾಶಿಯಲ್ಲಿ ಈಗಾಗಲೇ ಸಾಕಷ್ಟು ಮರಳು ಸಾಗಿಸಿರುವುದು ಗೋಚರಿಸುತ್ತದೆ. ಅಕ್ರಮ ಮರಳು ದಂಧೆಕೋರರಿಗೆ ನೆರವು ನೀಡಲಾಗುತ್ತಿದೆಯೇ ಎಂಬ ಅನುಮಾನವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.
ಕಷ್ಟಪಟ್ಟು ಗುಡ್ಡೆ ಹಾಕಿದ ಮರಳನ್ನು ಖಾಲಿ ಮಾಡುವ ಮುನ್ನ ಸಂಬಂಧಿತ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮ ಮರಳು ಸಾಗಾಟ ಮತ್ತು ದಂಧೆಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕಿದೆ.
ಮರಳು ರಕ್ಷಣೆ ಜವಾಬ್ದಾರಿ ಯಾರದ್ದು?: ಬ್ರಿಡ್ಜ್ ನಿರ್ಮಾಣಕ್ಕಾಗಿ ಅಗೆದ ಗುಂಡಿಯಿಂದ ಸಂಗ್ರಹಗೊಳ್ಳುತ್ತಿರುವ ಮರಳಿನ ರಕ್ಷಣೆ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸುವುದು ನಮ್ಮ ಕರ್ತವ್ಯ. ಅಗೆದ ಮರಳು ಕಾಯುವ ಕೆಲಸ ನಮ್ಮಿಂದಾಗದು. ಸಂಬಂಧಿಸಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕು ಎನ್ನುತ್ತಾರೆ. ಹಾಗಾಗಿ ಮರಳು ರಕ್ಷಣೆ ಯಾರ ಹೊಣೆ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿದೆ.
ಕ್ರಮ ಯಾಕಿಲ್ಲ?: ಮಲಪ್ರಭೆ ಬರಿದಾಗುತ್ತಿದ್ದಂತೆ ನದಿ ತಟದ ಅಲ್ಲಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿರುವ ಆರೋಪಗಳು ಕೇಳಿಬರುತ್ತಿದ್ದು, ಅಧಿಕಾರಿಗಳು ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಅಕ್ರಮ ಮರಳು ದಂಧೆಕೋರರಿಗೆ ಯಾರ ಭಯವೂ ಇಲ್ಲದಾಗಿದ್ದು, ಸಂಬಂಧಿತ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.
ಮಲಪ್ರಭಾ ನದಿಯಲ್ಲಿ ಸಂಗ್ರಹಗೊಂಡ ಮರಳು ರಕ್ಷಣೆಗೆ ಅಧಿಕಾರಿಗಳು ಮುಂದಾಗಬೇಕು. ಅಕ್ರಮ ಮರಳು ದಂಧೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.| ದೊಡ್ಡಪ್ಪ ಗಣಾಚಾರಿ, ಪಪಂ ಸದಸ್ಯ, ಎಂ.ಕೆ.ಹುಬ್ಬಳ್ಳಿಅಕ್ರಮ ಮರಳು ದಂಧೆ ಕಡಿವಾಣಕ್ಕೆ ನಮ್ಮ ಇಲಾಖೆಯಿಂದ ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಅಂಥವರ ಬಗ್ಗೆ ನಿಗಾ ಇಡಲಾಗಿದ್ದು, ಮಲಪ್ರಭಾ ನದಿಯಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಗುಂಡಿ ಅಗೆದು ಸಂಗ್ರಹಿಸಲಾಗಿರುವ ಮರಳು ರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು.| ಸೋಮಲಿಂಗಪ್ಪ ಹಾಲಗಿ, ತಹಸೀಲ್ದಾರ್, ಚನ್ನಮ್ಮನ ಕಿತ್ತೂರು
| ಶಿವಾನಂದ ವಿಭೂತಿಮಠ ಎಂ.ಕೆ.ಹುಬ್ಬಳ್ಳಿ