ಕೂಡಿಗೆ ಸರ್ಕಲ್‌ನಲ್ಲಿ ಹೈಟೆಕ್ ಶೌಚಗೃಹ ನಿರ್ಮಾಣ

25mdk05
Published on

ಕುಶಾಲನಗರ: ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಅಧ್ಯಕ್ಷ ಕೆ.ಟಿ. ಗಿರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೂಡಿಗೆ ಸರ್ಕಲ್‌ನಲ್ಲಿ ಹೈಟೆಕ್ ಶೌಚಗೃಹ ನಿರ್ಮಾಣ ಮಾಡುವ ಬಗ್ಗೆ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.

ಶುಚಿತ್ವಕ್ಕೆ ಹೆಚ್ಚಿನ ಅದ್ಯತೆ ನೀಡುವುದರ ಜತೆಗೆ ಎಲ್ಲ ವಾರ್ಡ್‌ಗಳಿಗೆ ಸಮರ್ಪಕವಾಗಿ ಕುಡಿಯುವ ನೀರಿನ ಸರಬರಾಜು ಮಾಡುವ ಮೂಲಕ ನೀರಿನ ಸಮಸ್ಯೆ ಬಗೆಹರಿಸುವ ಬಗ್ಗೆ ಹಾಜರಿದ್ದ ಸದಸ್ಯರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಎಲ್ಲ ವಾರ್ಡ್‌ಗಳಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಸೇರಿದಂತೆ ಅಭಿವೃದ್ಧಿಗೆ ಪೂರಕವಾದ ಅಂಶಗಳ ಬಗ್ಗೆ ಚರ್ಚೆಗಳು ನಡೆದವು. ಬೀದಿ ನಾಯಿಗಳ ಹಾವಾಳಿಗಳ ಬಗ್ಗೆ ಸಾರ್ವಜನಿಕರಿಂದ ಬಂದ ಅರ್ಜಿಗಳ ಬಗ್ಗೆ ಚರ್ಚೆ ಆಯಿತು.

ಅಧ್ಯಕ್ಷ ಕೆ.ಟಿ. ಗಿರೀಶ್ ಮಾತಾನಾಡಿ, ಸಭೆಯಲ್ಲಿ ಚರ್ಚೆಗೊಂಡ ವಿಷಯಗಳ ಬಗ್ಗೆ ಸಮಗ್ರವಾದ ವ್ಯವಸ್ಥೆಯನ್ನು ಕೈಗೊಳ್ಳುವ ಮೂಲಕ ಗ್ರಾಮ ವ್ಯಾಪ್ತಿಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಕೈಗೊಳ್ಳಲಾಗುವುದು. 15ನೇ ಹಣಕಾಸು ಯೋಜನೆಯ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಯತ್ನ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸುವ ಕ್ರಮಕ್ಕೆ ಮುಂದಾಗಲಾಗುವುದು. ಶೌಚಗೃಹ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಗ ಗುರುತಿಸಿ, ಕ್ರಿಯಾ ಯೋಜನೆ ಅನುಗುಣವಾಗಿ ಕಾಮಗಾರಿ ಕೈಗೊಳ್ಳಲಾಗುವುದು. ಗ್ರಾಮ ಪಂಚಾಯಿತಿ ಯೋಜನೆಯ ಅನುಗುಣವಾಗಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಮುಖೇನ ಗ್ರಾಮದ ಅಭಿವೃದ್ಧಿಗೆ ಪ್ರಯತ್ನ ಮಾಡಲಾಗುವುದು ಎಂದರು.

ಅಭಿವೃದ್ಧಿ ಅಧಿಕಾರಿ ಮಂಜುಳಾ ಹೊಸ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಗೆ ಬಂದ ಅರ್ಜಿಗಳ ಮಾಹಿತಿಯನ್ನು ಕಾರ್ಯದರ್ಶಿ ಪುನೀತ್ ಒದಗಿಸಿದರು. ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಟಿ.ಪಿ. ಹಮೀದ್, ಮಂಗಳಾ, ಮೋಹಿನಿ, ಅರುಣ್‌ರಾವ್, ಕೆ.ಎಸ್. ಶಿವಕುಮಾರ್, ಅನಂತ, ವಾಣಿ, ಎಚ್.ಎಸ್. ರವಿ, ರತ್ನಮ್ಮ, ಪಲ್ಲವಿ, ಲಕ್ಷ್ಮೀ, ಚಂದ್ರು, ಜಯಶೀಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net