ಕೂಡಿ ಬಾಳೋಣ.. ಸ್ನೇಹದಿಂದ ಬದುಕೋಣ..

Kendra
Published on

ಚಿತ್ರದುರ್ಗ: ಚೈತ್ರ ಮಾಸದ ಯುಗಾದಿ ಹಿಂದುಗಳ ದೊಡ್ಡ ಹಬ್ಬ. ಮನೆಯಲ್ಲಿ ಹಿರಿಯರು, ಕಿರಿಯರು, ಮಧ್ಯ ವಯಸ್ಕರೆಲ್ಲ ಎಣ್ಣೆ ಹಚ್ಚಿಕೊಂಡು ಬೇವಿನ ಮಿಶ್ರಣದ ನೀರಿನೊಂದಿಗೆ ಅಭ್ಯಂಜನಕ್ಕೆ ಮುಂದಾಗುತ್ತಾರೆ. ನಂತರ ಗುರು-ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಆದರೆ, ಇಲ್ಲಿನ ಪರಿಸ್ಥಿತಿ ಭಿನ್ನ. ಇವರಿಗೂ ಸ್ವಂತ ಸೂರಿಲ್ಲ. ತಮ್ಮವರು ಎನ್ನುವವರೂ ಇಲ್ಲ. ಆದರೂ ಭಾನುವಾರ ಅವರಿಗೆಲ್ಲ ಎಣ್ಣೆ ಮಜ್ಜನದ ಸಂಭ್ರಮ...

ಅಂದ ಹಾಗೆ ಈ ಹೃದಯಸ್ಮರ್ಶಿ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ತಾಲೂಕಿನ ಗೋನೂರು ನಿರಾಶ್ರಿತರ ಕೇಂದ್ರ. ಇಲ್ಲಿ ಒಟ್ಟು 377 ಮಂದಿ ಆಶ್ರಯ ಪಡೆಯುತ್ತಿದ್ದಾರೆ. ಕೆಲವರು ಅರೆ ಬುದ್ಧಿಮಾಂದ್ಯರು, ಅಂಗವಿಕಲರು, ಮಕ್ಕಳಿಂದ ದೂರವಾದ ವಯೋವೃದ್ಧರು ಇದ್ದಾರೆ. ಇವರಲ್ಲಿ ಅನಾಥ ಪ್ರಜ್ಞೆಯಾಗಲಿ, ಜಾತಿ-ಭೇದವಾಗಲಿ ಕಾಣಲು ಸಾಧ್ಯಲಿಲ್ಲ. ಎಲ್ಲರೂ ಕೂಡು ಕುಟುಂಬದವರಂತೆ ಬಾಳುತ್ತಿದ್ದು, ಸ್ನೇಹದಿಂದ ಬದುಕುತ್ತಿದ್ದಾರೆ.

ಹಲವು ಕಾರಣಕ್ಕೆ ನಿರಾಶ್ರಿತರ ಕೇಂದ್ರ ಸೇರಿದ್ದರೂ ದ್ವೇಷ, ಅಸೂಹೆ ಭಾವನೆ ಮೈಗೂಡಿಸಿಕೊಳ್ಳದೆ ಅಣ್ಣ-ತಮ್ಮಂದಿರಂತೆ, ಅಕ್ಕ-ತಂಗಿಯರಂತೆ ಬದುಕುತ್ತಿದ್ದಾರೆ. ಭಾನುವಾರ ಸಾಮೂಹಿಕವಾಗಿ ಎಣ್ಣೆ ಹಚ್ಚಿಕೊಂಡು, ಒಗ್ಗಟ್ಟಿನಿಂದ ಯುಗಾದಿ ಹಬ್ಬ ಆಚರಿಸಿ, ಸಂಭ್ರಮಿಸಿದರು.

ಒಬ್ಬರಿಗೊಬ್ಬರು ಎಣ್ಣೆ ಹಚ್ಚುತ್ತ ಸಹಕಾರ ನೀಡಿ ಸ್ನೇಹ-ಬಾಂಧವ್ಯಕ್ಕೆ ಸಾಕ್ಷಿಯಾದರು. ಸಂತಸದಲ್ಲಿದ್ದ ಎಲ್ಲರೂ ಕೆಲಕಾಲ ಕೇಂದ್ರದ ಸುತ್ತ ಸುತ್ತಾಡಿದರು. 305 ಪುರುಷರು, 72 ಮಹಿಳೆಯರಿದ್ದು, ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕೇಂದ್ರದಿಂದ ನಿರಾಶ್ರಿತರಿಗೆ ಹೊಸ ಬಟ್ಟೆ ಹಾಗೂ ಯೂನಿಫಾರ್ಮ್ ವಿತರಿಸಲಾಯಿತು. ನಂತರ ಎಲ್ಲರ ಅಭ್ಯಂಜನ ಸ್ನಾನ ಮುಗಿದ ಬಳಿಕ ಒಗ್ಗೂಡಿ ಹಬ್ಬ ಆಚರಿಸಲಾಯಿತು. ಸಾಮೂಹಿಕ ಆಚರಣೆಯಾದ್ದರಿಂದ ಹೊಸಬರ ಗಮನ ಸೆಳೆಯಿತು.

ಕೇಂದ್ರದಲ್ಲಿ ಹೋಳಿಗೆ ಸೇರಿ ತರಹೇವಾರಿ ಖಾದ್ಯ ಸಿದ್ಧಪಡಿಸಲಾಗಿತ್ತು. ಎಲ್ಲರೂ ಹಬ್ಬದೂಟ ಸವಿದರು. ಕೇಂದ್ರದ ಆಪ್ತ ಸಲಹೆಗಾರ ಎನ್.ಮಹದೇವಯ್ಯ, ಅಧೀಕ್ಷಕ ವಿಜಯಕುಮಾರ್, ಸಿಬ್ಬಂದಿಗಳಾದ ದೇವರಾಜ್, ಪಾಲಯ್ಯ, ರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net