ಗುಂಡ್ಲುಪೇಟೆ : ಕಬಿನಿಯಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ನಂಜನಗೂಡು ತಾಲೂಕಿನ ದೇಬೂರಿನ ಪಂಪ್ ಹೌಸ್‌ನಲ್ಲಿ ಮೋಟಾರು ಅಳವಡಿಸುವ ಕಾಮಗಾರಿಯನ್ನು ಸೋಮವಾರ ಪುರಸಭೆ ಅಧ್ಯಕ್ಷ ಹಾಗೂ ಅಧಿಕಾರಿಗಳು ಪರಿಶೀಲಿಸಿದರು.
ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ಪಂಪ್‌ಹೌಸ್‌ನಲ್ಲಿ 250 ಎಚ್‌ಪಿ ಸಾಮರ್ಥ್ಯದ ಮೋಟಾರು ಅಳವಡಿಸುವ ಕಾಮಗಾರಿ ಕೈಗೊಂಡಿದ್ದು, ಪರಿಣಾಮ 25 ದಿನಗಳಿಂದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಸ್ಥಗಿತಗೊಳಿಸಿ ಕೊಳವೆ ಬಾವಿಗಳಿಂದ ಬಡಾವಣೆಗಳಿಗೆ ನೀರು ಪೂರೈಸಲಾಗುತ್ತಿತ್ತು. 20 ದಿನಗಳಿಂದ ಕಾಮಗಾರಿ ನಡೆಸುತ್ತಿದ್ದರೂ ಕೆಲಸ ಪೂರ್ಣವಾಗದ ಹಿನ್ನೆಲೆಯಲ್ಲಿ ಪುರಸಭೆ ಅಧ್ಯಕ್ಷ ಜಿ.ಎಸ್.ಮಧುಸೂಧನ್ ಹಾಗೂ ಅಧಿಕಾರಿಗಳು ಪಂಪ್ ಹೌಸ್‌ಗೆ ಭೇಟಿ ನೀಡಿ ಪರಿಶೀಲಿಸಿದರು.
ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು ಪಂಪ್‌ಹೌಸ್ ಒಳಗೆ ನೀರು ನುಗ್ಗಿದ್ದರಿಂದ ಕಾಮಗಾರಿ ವಿಳಂಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಕೆಲವೇ ದಿನಗಳಲ್ಲಿ ವರಮಹಾಲಕ್ಷ್ಮಿ ಹಬ್ಬವಿರುವುದರಿಂದ ಕೂಡಲೇ ನೀರು ಸರಬರಾಜು ಮಾಡಲು ಕ್ರಮಕೈಗೊಳ್ಳಬೇಕು ಎಂದು ಮಧುಸೂಧನ್ ಸೂಚಿಸಿದರು. ಪುರಸಭೆ ಮುಖ್ಯಾಧಿಕಾರಿ ಶರವಣ, ಇಂಜಿನಿಯರ್ ಮಂಜುನಾಥ್ ಇದ್ದರು.