ಕುಸ್ತಿಪಟುಗಳ ಬಂಧನ ಖಂಡಿಸಿ ಸಿಐಟಿಯು ಪ್ರತಿಭಟನೆ

8
Published on

ಮೈಸೂರು: ಕುಸ್ತಿಪಟುಗಳ ಬಂಧನ ಖಂಡಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ವತಿಯಿಂದ ಬನ್ನಿಮಂಟಪದ ಮಿಲೇನಿಯಂ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಲೈಂಗಿಕ ಕಿರುಕುಳದ ಆರೋಪಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಒಲಂಪಿಕ್ ಪದಕ ವಿಜೇತ ಕುಸ್ತಿಪಟುಗಳ ನೇತೃತ್ವದಲ್ಲಿ ದೆಹಲಿಯಲ್ಲಿ ಏಪ್ರಿಲ್ 24ರಿಂದ ಅಹೋರಾತ್ರಿ ಪ್ರತಿಭಟನೆ ನಡೆಯುತ್ತಿದೆ. ಆದರೆ, ನ್ಯಾಯ ಕಲ್ಪಿಸುವ ಬದಲು ಕೇಂದ್ರ ಸರ್ಕಾರ ಕುಸ್ತಿಪಟುಗಳ ಮೇಲೆ ಹಲ್ಲೆ ಮಾಡಿ, ಬಂಧಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತ ಕುಸ್ತಿ ಫೆಡರೇಷನ್ ಮುಖ್ಯಸ್ಥ ಸೇರಿದಂತೆ ಇತರ ಸಿಬ್ಬಂದಿ ಅಪ್ರಾಪ್ತ ಹೆಣ್ಣುಮಕ್ಕಳು, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ, ಹಿಂಸೆ ನೀಡಿರುವುದು ಆಘಾತಕಾರಿ, ದೇಶವೇ ತಲೆತಗ್ಗಿಸುವಂತಹ ಘಟನೆಯಾಗಿದೆ. ‘ಬೇಟಿ ಬಚಾವೋ, ಬೇಟಿ ಪಡಾವೋ’ ಎಂದು ಪ್ರಚಾರ ಮಾಡುವ ನರೇಂದ್ರ ಮೋದಿ ಸರ್ಕಾರ ಆರೋಪಿ ಸಂಸದನನ್ನು ರಕ್ಷಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಿಡಿಕಾರಿದರು.

ದೂರಿನ ಆಧಾರದಲ್ಲಿ ಕಾನೂನು ಕ್ರಮ ಜರುಗಿಸಿ ನೊಂದ ಮಹಿಳಾ ಕ್ರೀಡಾಪಟುಗಳಿಗೆ ರಕ್ಷಣೆ ಒದಗಿಸಬೇಕಾಗಿದ್ದ ಸರ್ಕಾರ, ವ್ಯತಿರಿಕ್ತವಾಗಿ ನಡೆದುಕೊಂಡಿದ್ದು, ನ್ಯಾಯಕ್ಕಾಗಿ ಪ್ರತಿಭಟಿಸುತ್ತಿರುವ ಕ್ರೀಡಾಪಟುಗಳ ವಿರುದ್ಧ ಪೊಲೀಸ್ ಪಡೆಯನ್ನು ಬಳಸಿ ದಮನಕಾರಿ ಕ್ರಮ ಅನುಸರಿಸಿದೆ ಎಂದು ಆರೋಪಿಸಿದರು.

ದೇಶಕ್ಕಾಗಿ ಗೌರವ, ಕೀರ್ತಿ ತಂದ ಹೆಣ್ಣು ಮಕ್ಕಳನ್ನು ಬೀದಿಯಲ್ಲಿ ಎಳೆದಾಡಿ ಅವಮಾನಗೊಳಿಸಲಾಗಿದೆ. ತಪ್ಪಿತಸ್ಥ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕ್ರೀಡಾಪಟುಗಳ ಆತ್ಮಸ್ಥೈರ್ಯ ಕುಂದಿಸುವ ಕೆಲಸವನ್ನು ಬಿಜೆಪಿ ಸರ್ಕಾರ ನಿಲ್ಲಸಬೇಕು. ಜತೆಗೆ ಆರೋಪಿ ಬ್ರಿಜ್‌ಭೂಷಣ್ ಸಿಂಗ್ ಅವರನ್ನು ಭಾರತ ಕುಸ್ತಿ ಫೆಡರೇಷನ್ ಸ್ಥಾನದಿಂದ ವಜಾಗೊಳಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ರಾಜ್ಯ ಅಧ್ಯಕ್ಷೆ ಎಸ್.ವರಲಕ್ಷ್ಮೀ, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರಾಜ್ಯ ಕಾರ್ಯದರ್ಶಿಗಳಾದ ಸುನಂದಾ, ಮಹಾಂತೇಶ್, ಜಿಲ್ಲಾ ಅಧ್ಯಕ್ಷ ಜಿ.ಜಯರಾಮ್, ಮುಖಂಡರಾದ ಬಾಲಾಜಿರಾವ್, ಅಣ್ಣಪ್ಪ, ಬಲರಾಮ್, ಶ್ರೀಕಾಂತ್, ಬಸವಯ್ಯ, ಮೆಹಬೂಬ್ ಪಾಷಾ, ಜಯಚಂದ್ರ, ಲೋಕೇಶ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net