ಕುಸ್ತಿಗೆ ತೊಡೆ ತಟ್ಟಿ ನಿಂತ ಪೈಲ್ವಾನರು

10 mlv2
Published on

ಮಳವಳ್ಳಿ: ಸಿಡಿ ಹಬ್ಬದ ಪ್ರಯುಕ್ತ ಪಟ್ಟಣದ ರಾಮಾರೂಢಸ್ವಾಮಿ ಮಠದ ಹತ್ತುಜನಗಳ ಗರಡಿ ವತಿಯಿಂದ ಭಾನುವಾರ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಆವರಣದಲ್ಲಿ ಗ್ರಾಮೀಣ ಸೊಗಡಿನ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು.

ಶಾಸಕ ಡಾ.ಕೆ.ಅನ್ನದಾನಿ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣರ ಅಚ್ಚುಮೆಚ್ಚಿನ ಪಂದ್ಯಗಳಲ್ಲಿ ಒಂದಾಗಿದ್ದ ಕುಸ್ತಿಪಂದ್ಯ ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿದ್ದು, ಕುಸ್ತಿಮನೆ ಹಾಗೂ ಗರಡಿ ಮನೆಗಳು ಅಂದಿನ ಕಾಲಕ್ಕೆ ಪ್ರತಿ ಹಳ್ಳಿ-ಪಟ್ಟಣಗಳಲ್ಲಿ ಇರುತ್ತಿದ್ದವು. ಕಸರತ್ತು ಮಾಡುವುದರ ಜತೆಗೆ ದೇಹವನ್ನು ಸದೃಢವಾಗಿಟ್ಟುಕೊಂಡಿದ್ದ ನೂರಾರು ಯುವಕರ ತಂಡಗಳನ್ನು ಒಗ್ಗೂಡಿಸಿ ತರಬೇತು ನೀಡುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಆಯೋಜಿಸುತ್ತಿದ್ದ ಕುಸ್ತಿಪಂದ್ಯಗಳನ್ನು ನೋಡಲು ನೂರಾರು ಹಳ್ಳಿಗಳಿಂದ ಜನರು ಆಗಮಿಸಿ ಸಂಭ್ರಮಿಸುತ್ತಿದ್ದರು. ಇಂತಹ ಪಾರಂಪಾರಿಕ ಪಂದ್ಯಗಳು ಇತ್ತೀಚಿನ ದಿನಮಾನಗಳಲ್ಲಿ ನಶಿಸುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.

ಕುಸ್ತಿ ತರಬೇತಿ ಪಡೆಯುವ ಕ್ರೀಡಾಳುಗಳು ದೇಹ ದಂಡಿಸಿ ಕಸರತ್ತು ಮಾಡುವುದರಿಂದ ಆರೋಗ್ಯವಂತ ಹಾಗೂ ಮಾನಸಿಕವಾಗಿ ಸದೃಢರಾಗಿರಬಹುದು ಎಂದರು.

ಪಂದ್ಯಾವಳಿಗೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಪೈಲ್ವಾನರು ಭಾಗವಹಿಸಿದ್ದರು.
ರಮ್ಮನಹಳ್ಳಿ ಪೈಲ್ವಾನ್ ರವಿ ಪ್ರಥಮ ಸ್ಥಾನ ಪಡೆದರು.

ರಾಮಾರೂಢ ಮಠದ ಬಸವನಂದಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಜಿಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಕಂಸಾಗರ, ತಾಪಂ ಉಪಾಧ್ಯಕ್ಷ ಮಾಧು, ಮುಖಂಡರಾದ ಮಲ್ಲೇಗೌಡ, ದೇವರಾಜು, ಡಾ.ಶ್ರೀಧರ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net