

ಸೋಮವಾರಪೇಟೆ: ಕಳೆದ 60 ವರ್ಷಗಳಿಂದ ಕುಸುಬೂರು ಗ್ರಾಮದಲ್ಲಿ ಮನೆ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಆದರೆ ನಮಗೆ ಹಕ್ಕುಪತ್ರ ನೀಡದೆ ಕಂದಾಯ ಇಲಾಖೆ ವಂಚಿಸುತ್ತಿದೆ ಎಂದು ನಿವಾಸಿಗಳು ಶಾಸಕ ಡಾ.ಮಂತರ್‌ಗೌಡ ಅವರಲ್ಲಿ ನೋವು ತೋಡಿಕೊಂಡ ಹಿನ್ನೆಲೆಯಲ್ಲಿ ಇತ್ತೀಚೆಗೆ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 11 ಕುಟುಂಬಗಳಿಂದ ಸೂಕ್ತ ಮಾಹಿತಿ ಪಡೆದು ಮನೆಗಳಿಗೆ ಹಕ್ಕು ಪತ್ರ ನೀಡುವ ವ್ಯವಸ್ಥೆ ಮಾಡಬೇಕೆಂದು ತಹಸೀಲ್ದಾರ್ ಕೃಷ್ಣಮೂರ್ತಿ ಅವರಿಗೆ ಸೂಚಿಸಿದರು.
ಗ್ರಾಮದಲ್ಲಿ ಹಲವಾರು ವರ್ಷಗಳಿಂದ ನೆಲೆ ನಿಂತಿದ್ದು, ಹಕ್ಕುಪತ್ರ ನೀಡುವಂತೆ ದಶಕಗಳಿಂದಲೂ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳಾದ ರವಿಕುಮಾರ್, ರಮ್ಯಾ ದೂರಿದರು.
ಮನೆಗಳಿರುವ ಜಾಗ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎನ್ನಲಾಗಿದ್ದು, 60 ವರ್ಷಗಳಿಂದಲೂ ಇಲ್ಲಿಯೇ ವಾಸ ಮಾಡುತ್ತಿರುವುದರಿಂದ ಅರಣ್ಯ ಹಕ್ಕಿನಡಿಯಲ್ಲಿ ಅರಣ್ಯ ಇಲಾಖೆಯಿಂದ ಎನ್‌ಒಸಿ ಪಡೆದು, ಹಕ್ಕುಪತ್ರ ನೀಡುಲು ಕ್ರಮಕೈಗೊಳ್ಳುವಂತೆ ಶಾಸಕರು ತಹಸೀಲ್ದಾರರಿಗೆ ಸೂಚಿಸಿದರು.
ಕುಸುಬೂರು ಗ್ರಾಮ ನಿವಾಸಿಗಳಾದ ನರಸಿಂಹಮೂರ್ತಿ, ಧನಲಕ್ಷ್ಮೀ, ಪ್ರದೀಪ್ ಸೇರಿದಂತೆ ಸ್ಥಳೀಯರು ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.