ಗುಂಡ್ಲುಪೇಟೆ: ತಾಲೂಕಿನ ಜಿಲ್ಲಾ ಸಂಪರ್ಕ ರಸ್ತೆಯಲ್ಲಿ ಮಿತಿ ಮೀರಿದ ಓವರ್ ಲೋಡ್ ಟಿಪ್ಪರ್‌ಗಳ ಸಂಚಾರದಿಂದ ದೊಡ್ಡ ದೊಡ್ಡ ಸೇತುವೆಗಳು ಶಿಥಿಲವಾಗಿ ಕುಸಿಯುವ ಹಂತಕ್ಕೆ ತಲುಪಿರುವ ಬಗ್ಗೆ ಸಾರ್ವಜನಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಪಟ್ಟಣದಿಂದ ಜಿಲ್ಲಾ ಕೇಂದ್ರಕ್ಕೆ ಹೋಗುವ ರಸ್ತೆಯ ಕಗ್ಗಳ ಗ್ರಾಮದ ಬಳಿಯಿರುವ ಸೇತುವೆಯು ಕೆಳಭಾಗದಲ್ಲಿ ಕುಸಿಯಲಾರಂಭಿಸಿದೆ. ಇತ್ತೀಚೆಗೆ ತೆರಕಣಾಂಬಿ ಸುತ್ತಮುತ್ತಲೂ ಭಾರಿ ಪ್ರಮಾಣದ ಗಣಿಗಾರಿಕೆ ನಡೆಯುತ್ತಿದೆ. ಇವುಗಳಿಂದ ನಿಗದಿತ ಮಿತಿಗಿಂತ ಅತ್ಯಧಿಕ ಪ್ರಮಾಣದ ಕಲ್ಲು ಸಾಗಿಸುವ ಟಿಪ್ಪರ್‌ಗಳ ಭರಾಟೆ ಹೆಚ್ಚಾಗಿದೆ. ಅಲ್ಲದೆ ಕರಿಕಲ್ಲು ಗಣಿಗಳಲ್ಲಿ ನಿರುಪಯುಕ್ತವಾಗಿರುವ ಕಲ್ಲು ಬಂಡೆಗಳನ್ನು ಕ್ರಷರ್‌ಗಳಿಗೆ ಸಾಗಣೆ ಮಾಡಲಾಗುತ್ತಿದೆ. ಇವುಗಳಿಗೆ ರಾಯಲ್ಟಿ ಪಾವತಿಸಲು ರಾತ್ರಿ 8 ಗಂಟೆಗೆ ಆರಂಭಿಸಿದರೆ ಬೆಳಗ್ಗೆ 6 ಗಂಟೆವರೆಗೂ ನಿರಂತರವಾಗಿ ಸಾಗಣೆ ಮಾಡುತ್ತಿದ್ದಾರೆ.
ಹಿಂದೆ ಮಳೆಗಾಲದಲ್ಲಿ ಬೆಟ್ಟಗುಡ್ಡಗಳಿಂದ ಹರಿದುಬರುತ್ತಿದ್ದ ಭಾರಿ ಪ್ರಮಾಣದ ನೀರು ಗುಂಡ್ಲು ನದಿ ಸೇರಲು ಇಟ್ಟಿಗೆ, ಗಾರೆ ಹಾಗೂ ಸಿಮೆಂಟ್ ಬಳಸಿ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿಸಿದ್ದ ಈ ಸೇತುವೆ ಅತ್ಯಂತ ಮಹತ್ವದ್ದಾಗಿದೆ. ಇತ್ತೀಚಿನ ದಿನಗಳಲ್ಲಿ ಹಗಲಿರುಳು ಕಲ್ಲಿನ ಟಿಪ್ಪರ್‌ಗಳು ಸಂಚರಿಸುತ್ತಿದ್ದು, ಇವುಗಳ ಭಾರಕ್ಕೆ ಸೇತುವೆ ಕೆಳಗೆ ನೀರು ಹರಿದುಹೋಗಲು ನಿರ್ಮಿಸಿದ್ದ ಕಮಾನುಗಳ ಇಟ್ಟಿಗೆಗಳು ಒಂದೊಂದಾಗಿ ಕಳಚಿಬೀಳುತ್ತಿವೆ. ಇದರಿಂದ ಇಡೀ ಸೇತುವೆಯೇ ಕುಸಿಯುವ ಆತಂಕ ಎದುರಾಗಿದೆ. ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತು ಅಧಿಕ ಭಾರದ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕದಿದ್ದರೆ ಶತಮಾನದ ಸೇತುವೆ ಕುಸಿದು ಭಾರಿ ಅನಾಹುತ ಸಂಭವಿಸುವುದು ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.
ಜಿಲ್ಲಾಡಳಿತಕ್ಕೆ ಪಿಡಬ್ಲುೃಡಿ ಪತ್ರ: ಇಂಡಿಯನ್ ರೋಡ್ ಕಾಂಗ್ರೆಸ್(ಐಆರ್‌ಸಿ) ನಿಯಮದ ಪ್ರಕಾರ ಸಿಂಗಲ್ ಆಕ್ಸೆಲ್ ವಾಹನವು 12 ಟನ್, ಡಬಲ್ ಆಕ್ಸೆಲ್ ವಾಹನವು 16.20 ಟನ್ ಭಾರವನ್ನು ರಸ್ತೆಯ ಮೇಲೆ ಸಾಗಿಸಲು ಅವಕಾಶವಿದ್ದು, ಈ ರಸ್ತೆಗಳನ್ನು ಇಷ್ಟು ಭಾರದ ವಾಹನಗಳ ಸಂಚಾರಕ್ಕೆ ವಿನ್ಯಾಸಗೊಳಿಸಿ ನಿರ್ಮಿಸಲಾಗಿದೆ. ಆದರೆ ಅಧಿಕ ಭಾರದ ವಾಹನಗಳನ್ನು ತಡೆದು ತಪಾಸಣೆ ಮಾಡಿದಾಗ ಈ ರಸ್ತೆಗಳಲ್ಲಿ ಪರ್ಮಿಟ್ ಇಲ್ಲದೆ 40 ರಿಂದ 50 ಟನ್ ಭಾರ ಹೊತ್ತ ವಾಹನಗಳು ಸಂಚರಿಸುತ್ತಿರುವುದು ಕಂಡುಬಂದಿರುವ ಬಗ್ಗೆ ಲೋಕೋಪಯೋಗಿ ಇಲಾಖೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದೆ.
ಈ ರಸ್ತೆ ಜಿಲ್ಲಾ ಸಂಪರ್ಕ ರಸ್ತೆಯಾಗಿದ್ದರೂ ಇಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿಸಿ ಡಾಂಬರ್ ಹಾಕಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿಸಿದ ಸೇತುವೆ ತುಂಬ ಗಟ್ಟಿಮುಟ್ಟಾಗಿದ್ದರೂ ಓವರ್ ಲೋಡ್ ಟಿಪ್ಪರ್‌ಗಳ ನಿರಂತರ ಸಂಚಾರದಿಂದ ಗುಂಡಿಬಿದ್ದಿರುವ ಜತೆಗೆ ಸೇತುವೆ ಕುಸಿಯಲಾರಂಭಿಸಿದೆ. ಮೊದಲೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಎದುರಿಸುತ್ತಿರುವ ಸರ್ಕಾರ ಹೊಸದಾಗಿ ಸೇತುವೆ ನಿರ್ಮಿಸುವುದು ದೂರದ ಮಾತು ಎನ್ನುವಂತಾಗಿದೆ. ಆದ್ದರಿಂದ ಇನ್ನಾದರೂ ಸಂಬಂಧಿಸಿದವರು ಓವರ್ ಲೋಡ್ ಟಿಪ್ಪರ್ ಸಂಚಾರಕ್ಕೆ ಬ್ರೇಕ್ ಹಾಕಬೇಕು. ತಪ್ಪಿದಲ್ಲಿ ರಸ್ತೆ ತಡೆ ಚಳುವಳಿ ನಡೆಸಬೇಕಾಗುತ್ತದೆ. ಮಂಜುನಾಥ್, ಕಗ್ಗಳ ಗ್ರಾಮದ ರೈತ ಮುಖಂಡ ಅಧಿಕ ತೂಕದ ವಾಹನಗಳ ಸಂಚಾರದಿಂದ ರಸ್ತೆಗಳು ಹಾಳಾಗುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಗಳಿಗೆ ಮೇಲಿಂದ ಮೇಲೆ ಪ್ರತ್ಯೇಕವಾಗಿ ಪತ್ರ ಬರೆಯಲಾಗಿದೆ. ರವಿಕುಮಾರ್, ಎಇಇ, ಲೋಕೋಪಯೋಗಿ ಇಲಾಖೆ,