ಕುಸಿಯುತ್ತಿರುವ ಚಿಕ್ಕಚಾಗಳ್ಳಿ ಕೆರೆ ಏರಿ

IMG_20241112_084006
ಕುಸಿಯುತ್ತಿರುವ ಚಿಕ್ಕಚಾಗಳ್ಳಿ ಕೆರೆ ಏರಿ
Published on

ಹೊಳೆನರಸೀಪುರ: ಕಸಬಾ ಹೋಬಳಿಯ ಚಿಕ್ಕಚಾಗಳ್ಳಿ ಕೆರೆ ಏರಿ ಕುಸಿಯುತ್ತಿದ್ದು, ಅಪಾಯದಂಚಿನಲ್ಲಿದೆ.

ಚಿಕ್ಕಚಾಗಳ್ಳಿ, ಪೂಜೆಕೊಪ್ಪಲು ಮತ್ತು ಕೊಂಗಲಬೀಡು ಈ ಮೂರು ಗ್ರಾಮದ ಜೀವನಾಡಿಯಾದ ಈ ಕೆರೆ ಹೇಮಾವತಿ ಬಲದಂಡೆ ನಾಲೆ ಹಾಗೂ ಮಳೆಯ ನೀರಿನಿಂದ ಸಂಪೂರ್ಣ ಭರ್ತಿಯಾಗಿದೆ. ಬೇಸಿಗೆ ಸಮಯದಲ್ಲಿ ಬಿಟ್ಟರೆ ಉಳಿದ ಅವಧಿಯಲ್ಲಿ ತುಂಬಿರುತ್ತದೆ. ಏರಿಯ ಮಧ್ಯ ಭಾಗದಲ್ಲಿ ಪ್ರತಿನಿತ್ಯ ನೀರು ಕುಡಿಸಲು ಹಾಗೂ ಜನರು ಜಾನುವಾರುಗಳನ್ನು ತೊಳೆಯಲು ಇಳಿಸುತ್ತಾರೆ. ಹಲವು ದಿನಗಳಿಂದ ಇದೇ ರೀತಿ ಚಟುವಟಿಕೆ ನಿರಂತರವಾಗಿ ನಡೆಯುತ್ತಿರುವುದರಿಂದ ಕೆರೆ ಏರಿಯ ತಡ ಕುಸಿಯುತ್ತಾ ಬಂದಿದೆ. ಅರ್ಧ ಏರಿ ರಸ್ತೆವರೆಗೆ ಕುಸಿದಿದೆ. ಇದೇ ರೀತಿ ಮುಂದುವರಿದರೆ ಕೆಲವೇ ದಿನಗಳಲ್ಲಿ ಕೆರೆಏರಿ ಒಡೆಯುವ ಸಾಧ್ಯತೆ ಇದೆ. ನೀರಿನ ಒತ್ತಡಕ್ಕೆ ಕೆರೆ ಏರಿಯ ಮಣ್ಣು ಕುಸಿದು ಬಿರುಕು ಬಿಟ್ಟು ಕೆರೆಯ ನೀರು ಪೋಲಾಗುವುದರ ಜತೆಗೆ ನೂರಾರು ಎಕರೆ ಭೂಪ್ರದೇಶದಲ್ಲಿ ಬೆಳೆದಿರುವ ಭತ್ತದ ಬೆಳೆ ನಾಶವಾಗುವ ಆತಂಕ ಎದುರಾಗಿದೆ.

ಇದೇ ಕೆರೆಗೆ ಗ್ರಾಮ ಪಂಚಾಯಿತಿ ವತಿಯಿಂದ ಸಾವಿರಾರು ಮೀನಿನ ಮರಿಗಳನ್ನು ಬಿಡಲಾಗಿದೆ. ಕೆರೆಯನ್ನು ಹರಾಜು ಪಡೆದಿರುವ ಹರಾಜುದಾರರಿಗೆ ಭಾರಿ ನಷ್ಟ ಉಂಟಾಗುತ್ತದೆ. ಮೀನುಗಳು ನಾಶವಾಗುವ ಭೀತಿಯಲ್ಲಿ ಮೀನುಗಾರರು ಇದ್ದಾರೆ. ಮಳೆಗಾಲ ಮುಗಿಯುತ್ತಿದ್ದು, ಇರುವ ನೀರನ್ನು ಮುಂಜಾಗ್ರತಾ ಕ್ರಮ ವಹಿಸಿ ಹಿಡಿದಿಟ್ಟುಕೊಳ್ಳದಿದ್ದರೆ ಕೆರೆ ಬರಿದಾಗು ಸಂಭವ ಹೆಚ್ಚಾಗಿದೆ. ಈ ಕೆರೆಗೆ ಜನರು ಹಾಗೂ ಜಾನುವಾರುಗಳು ಇಳಿಯಲು ಏರಿಯಿಂದ ಸೋಪಾನಕಟ್ಟೆ ಹಾಗೂ ಇಳಿಜಾರನ್ನು ಕಾಂಕ್ರೀಟ್‌ನಿಂದ ನಿರ್ಮಾಣ ಮಾಡದಿರುವುದೇ ಈ ಅವ್ಯವಸ್ಥೆಗೆ ಕಾರಣವಾಗಿದೆ.

ಜತೆಗೆ ಗ್ರಾಮದಿಂದ ಈ ಕೆರೆ ಏರಿಯ ಮೇಲೆಯೇ ಕೊಂಗಲ ಬೀಡು ಗ್ರಾಮಸ್ಥರು ದಿನನಿತ್ಯ ಸಂಚರಿಸುತ್ತಾರೆ. ಪಟ್ಟಣಕ್ಕೆ ಬರಲು ಈ ಗ್ರಾಮದ ಜನರಿಗೆ ಕೆರೆ ಏರಿಯೇ ಮುಖ್ಯರಸ್ತೆಯಾಗಿದೆ. ಕೆರೆ ಏರಿಯ ಎರಡೂ ಬದಿಗಳಲ್ಲೂ ರಕ್ಷಣಾ ನಿಬರ್ಂಧಕಗಳನ್ನು ಅಳವಡಿಸಿಲ್ಲ. ನಿತ್ಯ ಭಯದಲ್ಲೇ ಜನರು ಓಡಾಡುತ್ತಾರೆ. ವಾಹನಗಳಲ್ಲಿ ಓಡಾಡುವ ವ್ಯಕ್ತಿಗಳು ಆಯ ತಪ್ಪಿದರೆ ಕೆರೆಯ ಪಾಲಾಗುತ್ತಾರೆ. ಕೆರೆ ಏರಿ ಒಡೆದರೆ ಪೊಂಗಲ ಬೀಡು ಗ್ರಾಮದ ಜನರ ಸಂಪರ್ಕವೂ ಕಡಿತಗೊಳ್ಳುತ್ತದೆ.

ಕೆರೆಯಲ್ಲಿ ನೀರು ಕುಡಿಸಲು ಹಾಗೂ ಸಾರ್ವಜನಿಕರು ಬಟ್ಟೆ ಶುಚಿಗೊಳಿಸಲು ಮತ್ತು ದಿನನಿತ್ಯದ ಕೆಲಸ ಕಾರ್ಯಗಳಿಗೆ ಅನುಕೂಲವಾಗುವ ರೀತಿಯಲ್ಲಿ ತುರ್ತಾಗಿ ಕೆರೆಗೆ ತೆರಳಲು ಮಾರ್ಗ ನಿರ್ಮಿಸಿ ಕೊಡಬೇಕು ಮತ್ತು ಅನಾಹುತ ಸಂಭವಿಸುವ ಮೊದಲು ಎಚ್ಚರಿಕೆವಹಿಸಿ ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಇಲಾಖೆಯವರಿಗೆ ಮೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net