ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು

Death
Published on

ಮಂಗಳೂರು/ಸುಳ್ಯ: ಮಂಗಳೂರು ಹೊರವಲಯದ ಕುಂಜತ್ತಬೈಲ್ ಸಮೀಪ ಮರಕಡದ ಮಸೀದಿಯಲ್ಲಿ ರಂಜಾನ್‌ನ ಮತ ಪ್ರವಚನ ನೀಡಲು ಬಂದಿದ್ದ ವಿದ್ಯಾರ್ಥಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಸುಳ್ಯ ಅಜ್ಜಾವರ ನಿವಾಸಿ ಹಸೈನಾರ್ ಹಾಜಿ-ಜಹುರಾ ದಂಪತಿ ಪುತ್ರ ಅಬ್ದುಲ್ ಅಲ್ ಸಿನಾನ್(20) ಮೃತಪಟ್ಟ ಯುವಕ. ಸಾಮಾನ್ಯವಾಗಿ ದರ್ಸ್ ವಿದ್ಯಾರ್ಥಿಗಳು ರಂಜಾನ್‌ನಲ್ಲಿ ಪ್ರವಚನ ತರಬೇತಿ ಪಡೆಯಲು ಮಸೀದಿಗಳಿಗೆ ತೆರಳುವುದು ವಾಡಿಕೆ. ಅದರಂತೆ ಸಿನಾನ್ ಕೂಡ ಶುಕ್ರವಾರ ಸಾಯಂಕಾಲ ಮರಕಡದ ಜುಮಾ ಮಸೀದಿಗೆ ತೆರಳಿದ್ದರು.

ಉಪವಾಸ ವ್ರತ ತೊರೆದು, ತರಾವೀಹ್ ನಮಾಜ್ ಮುಗಿಸಿ ಮತಪ್ರವಚನವನ್ನೂ ನೀಡಿದ್ದರು. ಶನಿವಾರ ಬೆಳಗ್ಗೆ ಊಟದ ಬಳಿಕ ತಟ್ಟೆ ತೊಳೆಯುತ್ತಿದ್ದಾಗ ಕುಸಿದು ಬಿದ್ದಿದ್ದರು. ಮಸೀದಿಯ ಖತೀಬ್ ಇಸಾಕ್ ಸಖಾಫಿ ಸಂಬಂಧಿಯಾಗಿದ್ದು, ಸಿನಾನ್‌ಗೆ ಅಪಸ್ಮಾರ ರೋಗವಿರುವ ಬಗ್ಗೆ ತಿಳಿದಿತ್ತು. ಅವರು ತಕ್ಷಣ ಮನೆಯವರಿಗೆ ಮಾಹಿತಿ ನೀಡಿದ್ದರು. ಮನೆಯವರ ಸೂಚನೆ ಮೇರೆಗೆ ಕುಸಿದು ಬಿದ್ದಿದ್ದ ಸಿನಾನ್‌ಗೆ ಅಲ್ಲೇ ಮಲಗಲು ವ್ಯವಸ್ಥೆ ಕಲ್ಪಿಸಿದ್ದರು. ಆದರೆ 8 ಗಂಟೆಯಾದರೂ ಎದ್ದೇಳದ ಕಾರಣ ಮನೆಯವರ ಗಮನಕ್ಕೆ ತರಲಾಯಿತು. ಮತ್ತೆ ಅವರ ಸೂಚನೆ ಮೇರೆಗೆ ಸಿನಾನ್‌ನನ್ನು ಎಬ್ಬಿಸಲು ಇಸಾಕ್ ಸಖಾಫಿ ಪ್ರಯತ್ನಿಸಿದರು. ಅಷ್ಟರಲ್ಲಿ ಸಿನಾನ್ ಮಲಗಿದಲ್ಲೇ ಮೃತಪಟ್ಟಿದ್ದರು.

ಕುಂಬ್ರ ಕೆಐಸಿ ವಾಫಿ(ಸನದು) ದ್ವಿತೀಯ ತರಗತಿ ವಿದ್ಯಾರ್ಥಿಯಾಗಿದ್ದ ಸಿನಾನ್ ಪ್ರಥಮ ವರ್ಷದ ಬಿಕಾಂ ಓದುತ್ತಿದ್ದರು. ಮುಹಿಮ್ಮಾತ್ ಹಿಫ್ಲ್ ಖುರ್‌ಆನ್‌ನ ಹಳೇ ವಿದ್ಯಾರ್ಥಿಯೂ ಆಗಿದ್ದರು. ಓದುವ ಹವ್ಯಾಸದೊಂದಿಗೆ ಪ್ರತಿಭಾವಂತ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದರು. ಅವರು ತಂದೆ, ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net