

ಮಳವಳ್ಳಿ: ತಾಲೂಕಿನಲ್ಲಿ ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ರಸ್ತೆ ಕೊಚ್ಚಿ ಹೋಗಿ 20 ದಿನಗಳಾದರೂ ಅಧಿಕಾರಿಗಳು ದುರಸ್ತಿಗೆ ಕ್ರಮವಹಿಸದ ಪರಿಣಾಮ ಯಮದೂರು-ಹಂಗ್ರಾಪುರ ಗ್ರಾಮಗಳ ಜನತೆ ತೊಂದರೆ ಅನುಭವಿಸುವಂತಾಗಿದೆ.
ಯಮದೂರು ಹಾಗೂ ಹಂಗ್ರಾಪುರ ನಡುವೆ ಹಳ್ಳದ ಬಳಿ ಸುಮಾರು 100 ಮೀಟರ್ ರಸ್ತೆ ಕೊಚ್ಚಿ ಹೋಗಿ 20 ದಿನಗಳೇ ಉರುಳಿವೆ. ಪರಿಣಾಮ ರಸ್ತೆಯೇ ಇಲ್ಲದ ಪರಿಣಾಮ ಜನತೆ ಹತ್ತಾರು ಕಿ.ಮೀ. ಬಳಸಿಕೊಂಡು ತಮ್ಮ ಗ್ರಾಮಗಳಿಗೆ ಸಂಚರಿಸುವಂತಾಗಿದೆ. ಈ ರಸ್ತೆ ಮಳವಳ್ಳಿ ಪಟ್ಟಣದಿಂದ ರಾಗಿಬೊಮ್ಮನಹಳ್ಳಿ, ಯಮದೂರು, ಹಂಗ್ರಾಪುರ, ವಡಕೆಪುರ, ಅವ್ವೆರಹಳ್ಳಿ, ನೆಲ್ಲಿಗೆರೆ ಮಾರ್ಗವಾಗಿ ಪೂರಿಗಾಲಿ ಮತ್ತು ನರಸಿಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ನಾಲ್ಕೈದು ಕಿ.ಮೀ. ದೂರ ಕ್ರಮಿಸಿ ಪಟ್ಟಣದಲ್ಲಿ ತಮ್ಮ ದೈನಂದಿನ ಕೆಲಸಗಳನ್ನು ಮುಗಿಸಿ ತೆರಳುತ್ತಿದ್ದ ಈ ಭಾಗಗಳ ಜನರು ಇದೀಗ ರಸ್ತೆ ಕೊಚ್ಚಿ ಹೋಗಿರುವುದರಿಂದ ಮಳವಳ್ಳಿ ಪಟ್ಟಣಗೆ ರಾವಣಿ ಮಾರ್ಗ ಅಥವಾ ಸುಜ್ಜುಲೂರು ಚೆನ್ನಪಿಳ್ಳೆಕೊಪ್ಪಲು ಮಾರ್ಗವಾಗಿ ಸುಮಾರು 14 ಕಿ.ಮೀ. ಬಳಸಿಕೊಂಡು ಬರಬೇಕಾದ ದುಸ್ಥಿತಿ ಎದುರಾಗಿದೆ. ಇದರಿಂದ ಸ್ವಂತ ವಾಹನ ಹೊಂದಿದವರಿಗೆ ಹೆಚ್ಚು ಇಂದನ ವೆಚ್ಚವಾಗುತ್ತಿದ್ದರೆ, ಬಡವರು ದುಪ್ಪಟ್ಟು ಬಾಡಿಗೆ ನೀಡುವಂತಾಗಿದೆ. ರಾಗಿಬೊಮ್ಮನಹಳ್ಳಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಹಂಗ್ರಾಪುರ, ಗಣಗನೂರು ಗ್ರಾಮಗಳಿಂದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಡೆದುಕೊಂಡು ಹೋಗುವಂತಾಗಿದೆ.
ಒಟ್ಟಾರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ವ್ಯಾಪ್ತಿಯ ಜನತೆ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ರಸ್ತೆ ದುರಸ್ತಿಪಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.