ತಾಲೂಕಿನ ಬೂದಿಪಡಗ ಮತ್ತು ಕುಳ್ಳೂರು ಗ್ರಾಮಗಳಲ್ಲಿ ಸುಮಾರು 200 ಕ್ಕೂ ಹೆಚ್ಚು ಸೋಲಿಗ ಮತ್ತು ಬುಡಕಟ್ಟು ಕುಟುಂಬಗಳು ಹಾಗೂ ಇನ್ನಿತರೆ ಸಮುದಾಯದ ಕುಟುಂಬಗಳು ವಾಸ ಮಾಡುತ್ತಿದ್ದಾರೆ. ಅದಲ್ಲದೇ ಬೂದಿಪಡಗ ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ವಸತಿ ಶಾಲೆಯೂ ಇದ್ದು, 200 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬೂದಿಪಡಗ, ಕುಳ್ಳೂರು ಗ್ರಾಮದಿಂದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸುವರ್ಣಾವತಿ ಹಿನ್ನೀರಿಗೆ ಅಡ್ಡಲಾಗಿ ಸೇತುವೆಯೊಂದನ್ನು ನಿರ್ಮಾಣ ಮಾಡಲಾಗಿತ್ತು. ಈ ಸೇತುವೆ ನಿರ್ಮಾಣವಾದ ವರ್ಷದಲ್ಲೇ ನಿರಂತರವಾಗಿ ಸುರಿದ ಮಳೆ ಮತ್ತು ಕಳಪೆ ಕಾಮಗಾರಿಯಿಂದ ಎರಡು ಕಡೆ ಕುಸಿದು ಹೋಗಿದೆ. ಪರಿಣಾಮವಾಗಿ ಜನರು 4-5 ಕಿ.ಮೀ ನಡೆದುಕೊಂಡು ಬಂದು ಕುಳ್ಳೂರು ಗೇಟ್ ಬಳಿ ಸಾರಿಗೆ ಬಸ್ ಹತ್ತಬೇಕಾಗಿದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಮೊದಲು ಸೇತುವೆ ಸರಿಯಾಗಿದ್ದ ಸಮಯದಲ್ಲಿ ಗ್ರಾಮಕ್ಕೆ ಸಾರಿಗೆ ಬಸ್ ಸಂಚಾರ ಮಾಡುತ್ತಿತ್ತು. ಆದರೇ ಈಗ ಗ್ರಾಮಕ್ಕೆ ಸಾರಿಗೆ ಸೌಲಭ್ಯವಿಲ್ಲದೇ ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಬುಡಕಟ್ಟು ಸೋಲಿಗ ಮತ್ತು ಇನ್ನಿತರೆ ತಳಸಮುದಾಯಗಳ ಜನರು ಹಾಗೂ ವಿದ್ಯಾರ್ಥಿಗಳು ನಿತ್ಯವೂ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಸಂಬಂಧ ಹಲವಾರು ಬಾರಿ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಇರುವುದೊಂದೇ ಮಾರ್ಗ:
ಬೂದಿಪಡಗ, ಕುಳ್ಳೂರು ಗ್ರಾಮದಿಂದ ಚಾಮರಾಜನಗರ-ಸತ್ಯಮಂಗಲ ಮುಖ್ಯರಸ್ತೆಗೆ ಬರಲು ಇದೊಂದೆ ರಸ್ತೆ ಮಾರ್ಗ ಇರುವುದರಿಂದ ಸಾರ್ವಜನಿಕರು ನಿತ್ಯವೂ ಸಮಸ್ಯೆ ಅನುಭವಿಸುವಂತಾಗಿದೆ. ಗ್ರಾಮದಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆಯಾಯಿತು ಅಂದರೇ, ಗ್ರಾಮಕ್ಕೆ ಆಂಬುಲೆನ್ಸ್ ಕೂಡ ಬರಲು ಸಾಧ್ಯವಾಗುತ್ತಿಲ್ಲ. ದ್ವಿಚಕ್ರ ವಾಹನ ಮತ್ತು ಇನ್ನಿತರೆ ಸ್ವಂತ ವಾಹನ ಹೊಂದಿರುವವರನ್ನು ಹೊರತುಪಡಿಸಿ, ಹೆಚ್ಚಿನ ಕುಟುಂಬಗಳಿಗೆ ಇದು ಸಮಸ್ಯೆಯಾಗಿದೆ. ಸೇತುವೆ ಬಹಳ ತಳಮಟ್ಟದಲ್ಲಿ ನಿರ್ಮಾಣ ಮಾಡಿದ್ದರಿಂದ ಸುವರ್ಣಾವತಿ ಜಲಾಶಯದ ಹಿನ್ನೀರು ಹೆಚ್ಚಾದರಂತೂ, ಸೇತುವೆ ಸಂಪೂರ್ಣ ಮುಳುಗಡೆಯಾಗುತ್ತದೆ. ಮಳೆಗಾಲದಲ್ಲಿ ಸೇತುವೆಯಲ್ಲಿ ಸಂಚರಿಸುವುದಕ್ಕೆ ತುಂಬಾ ತೊಂದರೆ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇತುವೆ ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಾಡು ಪ್ರಾಣಿಗಳ ಹಾವಳಿ:
ತಾಲೂಕಿನ ಬೂದಿಪಡಗ ಮತ್ತು ಕುಳ್ಳೂರು ಗ್ರಾಮಗಳು ಕಾಡಂಚಿನಲ್ಲಿ ಇರುವುದರಿಂದ ಈ ರಸ್ತೆ ಮಾರ್ಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಸಾರಿಗೆ ವ್ಯವಸ್ಥೆ ಇಲ್ಲದೇ ಜನರು ಹಾಗೂ ವಿದ್ಯಾರ್ಥಿಗಳು ನಡೆದುಕೊಂಡು ಬರುವಾಗ ಬೆಳಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಹಲವಾರು ಬಾರಿ ಕಾಡು ಪ್ರಾಣಿಗಳು ದಾಳಿ ಮಾಡಿರುವ ಉದಾಹರಣೆಗಳು ಇದೆ. ಸಂಜೆಯ ವೇಳೆಯಲ್ಲಿ ಆನೆಯ ಹಾವಳಿಯಿಂದ ಸಾಕಷ್ಟು ಜನರು ಪಾರಾಗಿರುವವರು ಇದ್ದಾರೆ. ರಾತ್ರಿಯ ಸಮಯದಲ್ಲಿ ಕುಳ್ಳೂರು ಗೇಟ್ ನಿಂದ ಸುಮಾರು 5-6 ಕಿ.ಮೀ ನಡೆದುಕೊಂಡು ಬರಬೇಕಾಗಿರುವುದರಿಂದ ಜೀವವನ್ನು ಕೈಯಲ್ಲಿಡಿದುಕೊಂಡು ಬರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸೇತುವೆ ಕುಸಿದಿರುವುದಿಂದಲೇ ಈ ಸಮಸ್ಯೆಗಳು ಎದುರಾಗುತ್ತಿದ್ದು, ಈಗಲಾದರೂ ಸೇತುವೆಯನ್ನು ನಿರ್ಮಾಣ ಮಾಡಿಕೊಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ವಿದ್ಯಾರ್ಥಿಗಳಿಗೂ ತೊಂದರೆ:
ಬೂದಿಪಡಗ ಗ್ರಾಮದ ಸಮೀಪದಲ್ಲೇ ಕಿತ್ತೂರು ರಾಣಿ ಚೆನ್ನಮ್ಮ ಮಹಿಳೆಯರ ವಸತಿ ಶಾಲೆ ಇದ್ದು, ಸುಮಾರು 200 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿನಿಯರ ಯೋಗಕ್ಷೇಮ ವಿಚಾರಿಸಲು ಪ್ರತಿವಾರವೂ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಅವರು ಸಮಸ್ಯೆ ಅನುಭವಿಸುವಂತಾಗಿದೆ. ಈಗಾಗಲೇ ಸುವರ್ಣಾವತಿ ಹಿನ್ನೀರು ಕಡಿಮೆಯಾಗಿದ್ದು, ಬೇಸಿಗೆಯ ವೇಳೆಯಲ್ಲಿ ಸೇತುವೆ ನಿರ್ಮಾಣ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸೇತುವೆ ಕುಸಿದಿರುವ ಕಾರಣದಿಂದ ಗ್ರಾಮಕ್ಕೆ ಬಸ್ ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ಗ್ರಾಮದ ಜನರು ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ವಸತಿ ಶಾಲೆಯ ವಿದ್ಯಾರ್ಥಿಗಳ ಪಾಲಕರು ಸಮಸ್ಯೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕುರಿತು ಕ್ರಮವಹಿಸಬೇಕು.
|ಮುತ್ತುರಾಜ್, ಮುಖಂಡ, ಬೂದಿಪಡಗ