ಕುಸಿದ ಸಸ್ತಾಪುರ ಶಾಲಾ ಗೋಡೆ ತೆರವು ಮಾಡಿ

Capture5
Published on

ಬಸವಕಲ್ಯಾಣ: ಸಸ್ತಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಕುಸಿದ ಗೋಡೆ ತೆರವುಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಶರಣು ಸಲಗರ ಸೂಚಿಸಿದರು.

ಸಸ್ತಾಪುರ ಗ್ರಾಮದ ಶಾಲೆಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ನಿರಂತರ ಮಳೆಯಿಂದಾಗಿ ಶಾಲೆಯ ಗೋಡೆ ನೆನೆದು ಕುಸಿದಿರುವುದನ್ನು ಗಮನಿಸಿದರು. ಬಿಇಒ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ 60 ವರ್ಷ ಹಳೆಯದಾದ ಶಾಲೆ ಗೋಡೆ ಕುಸಿದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಗೋಡೆಯನ್ನು ತೆರವುಗೊಳಿಸಲು ಲೋಕೋಪಯೋಗಿ ಎಇಇ ಅವರಿಗೆ ತಿಳಿಸಬೇಕು ಎಂದರು.

ಶಾಲೆಗೆ ಎರಡು ಹೊಸ ಕೋಣೆ ನಿರ್ಮಾಣಕ್ಕಾಗಿ ಅನುದಾನ ಕಲ್ಪಿಸಿ ಆದಷ್ಟು ಬೇಗ ಕೆಲಸ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು. ಮಳೆಯಿಂದಾಗಿ ಕಲವೆಡೆ ಶಾಲೆ ಗೋಡೆ ಕುಸಿದರೆ, ಮತ್ತೆ ಕೆಲವೆಡೆ ಮಾಳಿಗೆ ಸೋರುತ್ತಿವೆ. ಅಗತ್ಯವಿರುವ ಕಡೆ ಹೊಸ ಕೋಣೆ ನಿರ್ಮಾಣಕ್ಕೆ ಅನುದಾನ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಅಗತ್ಯವಿರುವ ಕಡೆ ಹೊಸ ಕೋಣೆ, ಕಂಪೌಂಡ್, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳಳನ್ನು ಕಲ್ಪಿಸಲು ಆದ್ಯತೆ ಮೇರೆಗೆ ಕ್ರಮ ಕೈಗೊಂಡು ಶೈಕ್ಷಣಿಕ ವಾತಾವರಣ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. ಶಾಲೆಯ ಮುಂಭಾಗ ಉದ್ಯಾನ ನಿರ್ಮಿಸಬೇಕು. ಸಸಿಗಳನ್ನು ನೆಡುವ ಮೂಲಕ ಅವುಗಳನ್ನು ಬೆಳೆಸುವಲ್ಲಿ ಕಾಳಜಿ ವಹಿಸಬೇಕು ಎಂದರು.

ಜಿಪಂ ಮಾಜಿ ಸದಸ್ಯ ಸುಧೀರ ಕಾಡಾದಿ, ಪ್ರಮುಖರಾದ ಬ್ರಹ್ಮಾರೆಡ್ಡಿ, ಬಾಲಾಜಿರೆಡ್ಡಿ, ಜಯಕುಮಾರ, ಆನಂದ ಶಿಂದೆ, ಶಿವಶಂಕರ ಬಚ್ಚಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net