

ಯಳಂದೂರು: ತಾಲೂಕಿನ ವೈ.ಕೆ. ಮೋಳೆ ಗ್ರಾಮದ ಕೆರೆ ಬದಿಯಲ್ಲಿ ಸಾಗುವ ಬದಿಯಲ್ಲೇ ರಸ್ತೆ ಕುಸಿದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಸತತ ಮಳೆಯಾದ ಹಿನ್ನೆಲೆಯಲ್ಲಿ ನೀರು ತುಂಬಿ ತೂಬುಗಳ ಮೂಲಕ ನೀರು ಹರಿಯುತ್ತಿತ್ತು. ಈ ವೇಳೆ ಕೆರೆಯ ಒಂದು ತೂಬು ಮಣ್ಣಿನಿಂದ ಮುಚ್ಚಿಕೊಂಡಿತ್ತು. ಇದರಿಂದ ನೀರು ಬರುತ್ತಿರಲಿಲ್ಲ. ಈ ತೂಬಿನ ವ್ಯಾಪ್ತಿಯ ಜಮೀನಿನ ಪ್ರದೇಶಗಳಿಗೆ ನೀರಿನ ಕೊರತೆ ಕಂಡುಬರುವುದನ್ನು ಗಮನಿಸಿದ ಸಂತೇಮರಹಳ್ಳಿ ನೀರಾವರಿ ಇಲಾಖೆ ತುರ್ತು ಕೆಲಸ ನಿಮಿತ್ತ ಕಾಲುವೆಗೆ ಪೈಪ್ ಅನ್ನು ಹಾಕಿ ಮಣ್ಣನ್ನು ಸಮರ್ಪಕವಾಗಿ ಹಾಕದ ಕಾರಣ ರಸ್ತೆಯು ಕುಸಿದಿದೆ. ಇದು ಕಿರಿದಾಗಿದ್ದು ದೊಡ್ಡ ಪ್ರಮಾಣದ ಹಳ್ಳ ನಿರ್ಮಾಣವಾಗಿರುವುದರಿಂದ ವಾಹನ ಸವಾರರು ಸಂಚರಿಸಲು ಪರದಾಡುವ ಪರಿಸ್ಥಿತಿ ಇದ್ದು, ಅನೇಕ ಅಪಘಾತಗಳು ಸಂಭವಿಸಿವೆ.
ಈ ಮಾರ್ಗದಲ್ಲಿ ಯಳಂದೂರು, ವೈ.ಕೆ. ಮೋಳೆ, ಇರಸವಾಡಿ, ಮಸಣಾಪುರ, ಚಾಟೀಪುರ, ಹೊಂಗನೂರು, ಗೂಳೀಪುರ, ಚಂಗಚಹಳ್ಳಿ, ಬೂದಂಬಳ್ಳಿ ಮೋಳೆ, ರೇಚಂಬಳ್ಳಿ, ಹೆಗ್ಗಡೆಹುಂಡಿ, ಚಗಂಚಹಳ್ಳಿ, ಚಂದಕವಾಡಿ, ಆಲೂರು ಸೇರಿದಂತೆ ಸಾಕಷ್ಟು ಗ್ರಾಮದ ಜನರು ದಿನನಿತ್ಯ ಸಾವಿರಾರು ವಾಹನಗಳ ಮೂಲಕ ಈ ಮಾರ್ಗದದಲ್ಲಿ ಸಂಚಾರಿಸುತ್ತಾರೆ. ಆದರೆ, ಇಲ್ಲಿ ಸವಾರಿ ಮಾಡುವುದು ಸವಾಲಿನ ಕೆಲಸವಾಗಿದೆ. ಅಲ್ಪ ಯಾಮಾರಿದರೂ ಹತ್ತಾರು ಅಡಿ ಆಳದ ಕಂದಕಕ್ಕೆ ವಾಹನ ಬೀಳುವ ಅಪಾಯವಿದೆ. ರಸ್ತೆ ಪರಿಸ್ಥಿತಿ ಹೀಗಾದ ಬಳಿಕ ಇಲ್ಲಿ 3 ಅಪಘಾತಗಳು ಸಂಭವಿಸಿವೆ. ಇದರಲ್ಲಿ 5 ಜನರಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕಾಲುವೆ ತೂಬನ್ನು ಸರಿಪಡಿಬೇಕಿದೆ.
ತಾಲೂಕಿನ ವೈ.ಕೆ.ಮೋಳೆ ಗ್ರಾಮದ ಕೆರೆಯ ಬದಿಯಲ್ಲಿ ನೀರಿನ ತೂಬು ಸಮರ್ಪಕವಾಗಿ ಹೋಗದ ಕಾರಣ 1 ತಿಂಗಳ ಹಿಂದೆ ಕೆಲಸ ಮಾಡಲಾಗಿದೆ. ಆ ಸ್ಥಳದಲ್ಲಿ ಮಣ್ಣು ಕುಸಿಯುತ್ತಿರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮವಹಿಸಲಾಗುತ್ತದೆ.
ವಿಶ್ವನಾರಾಯಣ್, ಎಇಇ ನೀರಾವರಿ ಇಲಾಖೆ, ಸಂತೇಮರಹಳ್ಳಿ
ವೈ.ಕೆ.ಮೋಳೆ ಗ್ರಾಮದ ಕೆರೆ ಬದಿಯಲ್ಲಿ ನೀರು ಹೋಗಲು ಒಂದು ಪೈಪ್ ಹಾಕಿ ಮಣ್ಣಿನಿಂದ ಮುಚ್ಚದಿರುವುದು ಮಣ್ಣು ಕುಸಿಯಲು ಕಾರಣವಾಗಿದೆ. ಇದರಿಂದ ಈ ಸ್ಥಳದಲ್ಲಿ ಅಪಘಾತವಾಗುತ್ತಿದೆ. ಸವಾರರಿಗೆ ಪ್ರಾಣಕ್ಕೆ ಕುತ್ತಾಗುವ ಸಂಭವವಿದೆ. ಈ ಬಗ್ಗೆ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ತಕ್ಷಣ ತಡೆಗೋಡೆ ನಿರ್ಮಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕಾಗಿದೆ.
ಸ್ವಾಮಿ, ವೈ.ಕೆ.ಮೋಳೆ