ಕುಸಿದ ಚಾಮುಂಡಿಬೆಟ್ಟದಲ್ಲಿ ರಸ್ತೆ ದುರಸ್ತಿಗೆ ಗ್ರಹಣ

3
Published on

ಆರ್.ಕೃಷ್ಣ ಮೈಸೂರು
ಮಳೆಯಿಂದ ಚಾಮುಂಡಿಬೆಟ್ಟದಲ್ಲಿ ಕುಸಿದ ರಸ್ತೆಯನ್ನು ಎರಡು ವರ್ಷ ಕಳೆದರೂ ಇನ್ನೂ ದುರಸ್ತಿಗೊಳಿಸಿಲ್ಲ. ಇದರಿಂದ ಚಾಮುಂಡಿಬೆಟ್ಟಕ್ಕೆ ಬಂದವರು ನಂದಿ ನೋಡುವುದರಿಂದ ವಂಚಿತರಾಗುತ್ತಿದ್ದಾರೆ.
ಈ ರಸ್ತೆ ಎರಡು ಬಾರಿ ಕುಸಿದಿದ್ದರೂ ದುರಸ್ತಿಪಡಿಸಿ ಸದೃಢವಾಗಿ ನಿರ್ಮಿಸಲು ಸಾಧ್ಯವಾಗಿಲ್ಲ. ವಿ.ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಒಮ್ಮೆ ಕುಸಿದಿದ್ದ ರಸ್ತೆಯನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಆದರೆ ದುರಸ್ತಿಗೊಂಡ ಕೆಲವೇ ವರ್ಷದಲ್ಲಿ ಮತ್ತೆ ಅನತಿ ದೂರದಲ್ಲಿ ಅದೇ ರಸ್ತೆ ಕುಸಿದು ದೊಡ್ಡ ಕಂದಕವೇ ನಿರ್ಮಾಣವಾಗಿದೆ. ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಟಿ.ಸೋಮಶೇಖರ್ ರಸ್ತೆ ದುರಸ್ತಿಗೆ ಮುಂದಾಗಿದ್ದರೂ ನಿರೀಕ್ಷಿತ ವೇಗ ದೊರೆತಿರಲಿಲ್ಲ.
ರಸ್ತೆ ಮರು ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆಯಾದರೂ ಅದು ಮಂದಗತಿಯಲ್ಲಿ ಸಾಗಿದ್ದು, ಈ ಮಳೆಗಾಲದಲ್ಲಿಯೂ ಅದು ಪೂರ್ಣಗೊಳ್ಳುವ ಲಕ್ಷಣ ಇಲ್ಲ. ನಾಡಹಬ್ಬ ದಸರಾಕ್ಕೆ ತಿಂಗಳ ಗಣನೆ ಆರಂಭಗೊಳ್ಳುತ್ತಿದ್ದು, ಚಾಮುಂಡಿಬೆಟ್ಟಕ್ಕೆ ಪ್ರವಾಸಿಗರ ಸಂಖ್ಯೆ ಏರಿಕೆಯಾಗಲಿದೆ.
ಅಲ್ಲದೆ, ಸರ್ಕಾರ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗಿದೆ. ಆದರೆ ರಸ್ತೆ ಸಂಪರ್ಕ ಇಲ್ಲದ ಕಾರಣ, ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವತೆಯಷ್ಟೇ ಪ್ರಾಮುಖ್ಯತೆ ಪಡೆದಿರುವ ನಂದಿ ವಿಗ್ರಹವನ್ನು ನೋಡುವುದರಿಂದ ಭಕ್ತರು ವಂಚಿತರಾಗುತ್ತಿದ್ದಾರೆ.
2021ರ ಅಕ್ಟೋಬರ್‌ನಲ್ಲಿ ಭೂ ಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇದರಿಂದ ವ್ಯೆ ಪಾಯಿಂಟ್ ಬಳಿಯೇ ಪೊಲೀಸರು ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ಮುಂದೆ ಯಾರೂ ಹೋಗದಂತೆ ತಡೆ ಹಾಕಿದ್ದಾರೆ.
ನಂದಿ ಸಂಪರ್ಕ ರಸ್ತೆಯಲ್ಲಿ ಭೂಕುಸಿತವಾದ ಕೆಲವೇ ದಿನಗಳಲ್ಲಿ ಮತ್ತೆ ಕುಸಿತದ ಸ್ಥಳದಿಂದ 50 ಮೀಟರ್‌ನಷ್ಟು ರಸ್ತೆ ಬಿರುಕು ಬಿಟ್ಟು ಮೂರು ಕಡೆ ಕುಸಿದಿತ್ತು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಭೂತಾಂತ್ರಿಕ ಇಂಜಿನಿಯರಿಂಗ್ ವಿಭಾಗದ ವಿಜ್ಞಾನಿಗಳು ಸ್ಥಳ ಪರಿಶೀಲಿಸಿ ಮಣ್ಣಿನ ಮಾದರಿಯನ್ನು ಪರೀಕ್ಷೆ ಮಾಡಿಸಲಾಗಿತ್ತು.
ರಸ್ತೆಯನ್ನು ಯಥಾಸ್ಥಿತಿಗೆ ತರಲು ತಗಲುವ ವೆಚ್ಚದೊಂದಿಗೆ ಸಮಗ್ರ ವರದಿ ಸಲ್ಲಿಸಿತ್ತು. ವರದಿ ಆಧರಿಸಿ ಹೆಚ್ಚಿನ ಪ್ರಮಾಣದಲ್ಲಿ ರಸ್ತೆ ಕುಸಿತ ಉಂಟಾಗಿದ್ದ ಸ್ಥಳದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ. ಈಗ ಕಲ್ಲುಗಳನ್ನು ಜೋಡಿಸಿ, ಕಬ್ಬಿಣದ ಜಾಲರಿಯನ್ನು ಅಳವಡಿಸಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ.
9.75 ಕೋಟಿ ರೂ. ವೆಚ್ಚ
ಕುಸಿದಿರುವ ನಂದಿ ಮಾರ್ಗದ ರಸ್ತೆಯನ್ನು ಮರು ನಿರ್ಮಾಣ ಮಾಡಲು 9.75 ಕೋಟಿ ರೂ. ವೆಚ್ಚವಾಗಲಿದೆ ಎಂದು ಐಐಎಸ್‌ಸಿ ವಿಜ್ಞಾನಿಗಳು ಅಂದಾಜಿಸಿದ್ದಾರೆ. ವಿಜ್ಞಾನಿಗಳ ಸಲಹೆಯಂತೆ 350 ಮೀಟರ್ ರಸ್ತೆ ಮರು ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಶೇ. 40ರಷ್ಟು ಪೂರ್ಣಗೊಂಡಿದೆ. ಚೆನ್ನೈ ಮೂಲದ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ.
ದುರಸ್ತಿಯಾಗುತ್ತಿರುವ ರಸ್ತೆಗೆ ಈಗ ನಿರ್ಮಾಣ ಸಾಮಗ್ರಿ ಸಾಗಿಸುವುದು ಸಮಸ್ಯೆಯಾಗುತ್ತಿದೆ. ಮೊದಲೇ ಕಿರಿದಾದ ನಂದಿ ಮಾರ್ಗದ ರಸ್ತೆಯಲ್ಲಿ ಒಂದು ಕಡೆಯಷ್ಟೇ ಸಂಚಾರ ಮಾಡಲು ಸಾಧ್ಯ. ಸಾಮಗ್ರಿ ತೆಗೆದುಕೊಂಡು ಹೋದ ವಾಹನಗಳು ವಾಪಸ್ ಅದೇ ಮಾರ್ಗದಲ್ಲಿ ಬರಬೇಕಿದೆ. ಆದರೆ ಕಿರಿದಾದ ರಸ್ತೆಯಲ್ಲಿ ವಾಹನಗಳನ್ನು ತಿರುಗಿಸುವುದು, ನಿರ್ಮಾಣ ಸಾಮಗ್ರಿಗಳಾದ ಸಿಮೆಂಟ್, ಕಲ್ಲು, ಕಬ್ಬಿಣ, ಎಂ.ಸ್ಯಾಂಡ್, ಮಣ್ಣು ಇತ್ಯಾದಿ ವಸ್ತುಗಳನ್ನು ದುರಸ್ತಿ ಮಾಡುತ್ತಿರುವ ಸ್ಥಳಕ್ಕೆ ತೆಗೆದುಕೊಂಡು ಹೋಗುವುದು ಚಾಲಕರಿಗೆ ಸವಾಲಿನ ಕೆಲಸವಾಗಿದೆ. ಮೊದಲೇ ಕುಸಿದಿರುವ ರಸ್ತೆಯಲ್ಲಿ ವಾಹನಗಳು ಭಾರವನ್ನು ಹೊತ್ತುಕೊಂಡು ಹೋಗುವುದರಿಂದ ಮತ್ತೆ ರಸ್ತೆ ಕುಸಿಯಲಿದೆಯೇ ಎನ್ನುವ ಆತಂಕ ಮನೆ ಮಾಡಿದೆ.
ರಸ್ತೆ ನಿರ್ಮಾಣ ಕಾಮಗಾರಿ ಕಳಪೆ ಹಾಗೂ ಅವೈಜ್ಞಾನಿಕವಾಗಿದೆ. ಜೋರು ಮಳೆಯಾದರೆ ಮತ್ತೆ ಕುಸಿಯುವ ಸಾಧ್ಯತೆ ಇದೆ. ಅದನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಬೆಟ್ಟದ ಸಂರಚನೆ ತುಂಬ ದುರ್ಬಲ ಹಾಗೂ ಸೂಕ್ಷ್ಮವೆಂಬುದನ್ನು ಅರ್ಥ ಮಾಡಿಕೊಂಡು ಕೆಲಸ ನಿರ್ವಹಿಸಬೇಕು. ಆದರೆ ಅದಕ್ಕೆ ತಕ್ಕಂತೆ ಕ್ರಮ ವಹಿಸಿಲ್ಲ ಎಂಬುದು ಪರಿಸರ ಬಳಗ ಮತ್ತು ಚಾಮುಂಡಿ ಬೆಟ್ಟ ಉಳಿಸಿ ಹೋರಾಟ ಸಮಿತಿಯ ಸಂಸ್ಥಾಪಕ ಸದಸ್ಯ ಪರಶುರಾಮೇಗೌಡರ ಆರೋಪ.
2021 ಹಾಗೂ 2022ರಲ್ಲಿ ಎರಡು ಬಾರಿ ಈಗಾಗಲೇ ಕುಸಿದಿರುವ ರಸ್ತೆಯನ್ನು ವೇಗವಾಗಿ ದುರಸ್ತಿಗೊಳಿಸದಿದ್ದರೆ ಈಗ ಆರಂಭಗೊಳ್ಳುವ ಮತ್ತೊಂದು ಮಳೆಗಾಲದಲ್ಲಿ ಅದೇ ಸ್ಥಳದಲ್ಲಿ ಮಣ್ಣು ಕುಸಿತವಾಗುವುದನ್ನು ತಳ್ಳಿ ಹಾಕುವಂತಿಲ್ಲ ಎನ್ನುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಪದೇ ಪದೆ ಕುಸಿಯುತ್ತಿರುವ ರಸ್ತೆಯನ್ನು ವೈಜ್ಞಾನಿಕವಾಗಿ ನಿರ್ಮಿಸಲು ಕ್ರಮ ವಹಿಸಲಾಗಿದೆ. ಐಐಎಸ್‌ಸಿ ಇಂಜಿನಿಯರುಗಳ ಸಲಹೆಯಂತೆ ನೂತನ ತಂತ್ರಜ್ಞಾನದಂತೆ ತಡೆಗೋಡೆ ನಿರ್ಮಿಸಲಾಗುತ್ತಿದೆ. ಬಲವಾದ ತಡೆಗೋಡೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ರಸ್ತೆ ನಿರ್ಮಾಣವನ್ನು ಶೀಘ್ರ ಮುಗಿಸಲಾಗುವುದು.
ನಾಗರಾಜ್ ಎಇಇ ಲೋಕೋಪಯೋಗಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net