

ಮೈಸೂರು: ನಿರಂತರ ಮಳೆಯಿಂದ ಕುಸಿದು ಬಿದ್ದಿರುವ ಪಾರಂಪರಿಕ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕಟ್ಟಡವನ್ನು ಲೋಕೋಪಯೋಗಿ ಇಂಜಿನಿಯರ್‌ಗಳು ಶನಿವಾರ ಪರಿಶೀಲಿಸಿದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಲಲಿತಾ ಮತ್ತು ನಾಲ್ವರ ತಂಡ ಕುಸಿದು ಬಿದ್ದ ಕಾಲೇಜು ಕಟ್ಟಡದ ಭಾಗ ಪರಿಶೀಲಿಸಿದರು. ಅಲ್ಲದೇ ಇನ್ನಿತರೆ ಕೊಠಡಿಗಳಿಗೂ ತೆರಳಿ ಅವುಗಳ ಸ್ಥಿತಿಗತಿಯನ್ನು ವೀಕ್ಷಿಸಿದರು. ಪ್ರಾಂಶುಪಾಲರಾದ ಡಾ.ಡಿ.ರವಿ ಮತ್ತಿತರ ಉಪನ್ಯಾಸಕರು ಹಾಜರಿದ್ದು, ಕೊಠಡಿಗಳ ಮಾಹಿತಿ, ಅವುಗಳ ಸ್ಥಿತಿಗತಿ ಕುರಿತು ಮಾಹಿತಿ ನೀಡಿದರು.
ಕುಸಿದು ಬಿದ್ದ ಪಾರಂಪರಿಕ ಕಟ್ಟಡದ ಸ್ಥಿತಿಯನ್ನು ಪರಿಶೀಲಿಸಿ ವರದಿ ನೀಡುವಂತೆ ಪ್ರಾಂಶುಪಾಲರ ಪತ್ರದ ಮೇರೆಗೆ ಕಾಲೇಜು ಶಿಕ್ಷಣ ಇಲಾಖೆ ಲೋಕಾಯುಕ್ತ ಇಲಾಖೆಯನ್ನು ಕೋರಲಾಗಿತ್ತು.
ಕಟ್ಟಡ ಯಾವ ಸ್ಥಿತಿಯಲ್ಲಿದೆ, ಇರುವ ಕೊಠಡಿಗಳಲ್ಲಿ ತರಗತಿ ನಡೆಸಲು ಬಳಸಬಹುದೇ ಎನ್ನುವ ಕುರಿತು ಮಾಹಿತಿ ಕೋರಲಾಗಿತ್ತು. ಅದರಂತೆ ಲೋಕೋಪಯೋಗಿ ಇಂಜಿನಿಯರ್‌ಗಳು ಆಗಮಿಸಿದ ಸ್ಥಳಪರಿಶೀಲನೆ ನಡೆಸಿದ್ದಾರೆ. ಕಟ್ಟಡ ಕೆಲ ಮಾದರಿಯನ್ನು ಸಂಗ್ರಹಿಸಿದ್ದು, ಪ್ರಯೋಗಾಲಯದ ಮಾಹಿತಿ ಬಂದ ಬಳಿಕ ಕೆಲ ದಿನಗಳಲ್ಲಿ ವರದಿ ಸಲ್ಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಡಿ.ರವಿ ತಿಳಿಸಿದರು.
ಕಾಲೇಜಿನಲ್ಲಿ ಸಧ್ಯ ಪದವಿ, ಸ್ನಾತಕೋತ್ತರ 3850 ವಿದ್ಯಾರ್ಥಿನಿಯರು, 350 ಸಿಬ್ಬಂದಿ ಇದ್ದಾರೆ. 106 ವರ್ಷದ ಪಾರಂಪರಿಕ ಶಾಲಾ ಕಟ್ಟಡ ಕುಸಿದು ಬಿದ್ದಿರುವುದರಿಂದ ಪ್ರಾಣಿಶಾಸ್ತ್ರ, ರಸಾಯನಶಾಸ್ತ್ರ ಪ್ರಯೋಗಾಲದ ಸುಮಾರು 40 ಲಕ್ಷ ರೂ. ಮೌಲ್ಯದ ಉಪಕರಣಗಳು ನಷ್ಟವಾಗಿದೆ ಎಂದು ತಿಳಿಸಿದ್ದಾರೆ.