ಕುಷ್ಟಗಿ ಗಂಗಾವತಿ ಉಪ ವಿಭಾಗಕ್ಕೆ ಬೇಡ

Published on

ಕೊಪ್ಪಳ: ಆಡಳಿತ ಕಾರ್ಯಭಾರ ತಗ್ಗಿಸಲು ಗಂಗಾವತಿಗೆ ಪ್ರತ್ಯೇಕ ಕಂದಾಯ ಉಪ ವಿಭಾಗ ಕಚೇರಿ ನೀಡಿರುವುದು ಸ್ವಾಗತಾರ್ಹ. ಆದರೆ, ಅದರಲ್ಲಿ ಕುಷ್ಟಗಿ ತಾಲೂಕು ಸೇರಿಸಬಾರದು. ಬದಲಿಗೆ ಕೊಪ್ಪಳ ಉಪ ವಿಭಾಗದಲ್ಲೇ ಮುಂದುವರಿಸಬೇಕೆಂದು ಹೈದ್ರಾಬಾದ್​ ಕರ್ನಾಟಕ ಯುವಶಕ್ತಿ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಗಾಣಿಗೇರ ಒತ್ತಾಯಿಸಿದರು.

ಆಡಳಿಕತಾತ್ಮಕ ದೃಷ್ಟಿಯಿಂದ ಎಸಿ ಕಚೇರಿ ಆರಂಭ ಉತ್ತಮ ಕೆಲಸ. ಆದರೆ, ಇದರಿಂದ ಕುಷ್ಟಗಿ ತಾಲೂಕಿನ ಜನರಿಗೆ ಅನುಕೂಲವಾಗುವುದಿಲ್ಲ. ಹನುಮನಾಳ ಹೋಬಳಿ ವ್ಯಾಪ್ತಿಯ ಕಡೇ ಗ್ರಾಮಗಳ ಜನರಿಗೆ ಗಂಗಾವತಿ ಬಹಳ ದೂರವಾಗಲಿದೆ. ಈಗಾಗಲೇ ಬೇರೆ ಇಲಾಖೆಯಲ್ಲಿರುವ ಉಪ ವಿಭಾಗಗಳಲ್ಲಿ ಕುಷ್ಟಗಿ ಸೇರಿಸಿದ್ದು ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಕಂದಾಯ ಉಪ ವಿಭಾಗಕ್ಕೂ ಕುಷ್ಟಗಿ ಸೇರಿಸಿದಲ್ಲಿ ಮತ್ತಷ್ಟು ಸಮಸ್ಯೆ ಆಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊಪ್ಪಳದಲ್ಲೇ ಮುಂದುವರಿಸಿದಲ್ಲಿ ಅನುಕೂಲವಾಗಲಿದೆ. ಕಂದಾಯ ಸೇರಿ ಇತರ ಕಾರ್ಯಗಳಿಗೆ ಜಿಲ್ಲಾ ಕೇಂದ್ರಕ್ಕೆ ಬರಲು ಸಾಧ್ಯ. ಇಲ್ಲದಿದ್ದರೆ ಕಂದಾಯ ಇಲಾಖೆ ಕಾರ್ಯಗಳಿಗಾಗಿಯೇ ಗಂಗಾವತಿಗೆ ತೆರಳಬೇಕಾಗುತ್ತದೆ. ಇತರ ಕೆಲಸಗಳಿಗೆ ಪುನ@ ಕೊಪ್ಪಳಕ್ಕೆ ಬರಬೇಕು. ಕೂಡಲೇ ಸರ್ಕಾರ ನಮ್ಮ ಮನವಿ ಪರಿಗಣಿಸಬೇಕು. ನೂತನ ಉಪ ವಿಭಾಗ ವ್ಯಾಪ್ತಿಯಿಂದ ಕುಷ್ಟಗಿ ತಾಲೂಕು ಕೈ ಬಿಟ್ಟು ಕೊಪ್ಪಳದಲ್ಲೇ ಮುಂದುವರಿಸಬೇಕು. ಕಂದಾಯ ವೃತ್ತಗಳನ್ನು ಹೆಚ್ಚಿಸಬೇಕು ಎಂದರು.

ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಂಟನೆ ಪದಾಧಿಕಾರಿಗಳಾದ ಕಿರಣ್​ ಜ್ಯೋತಿ, ರಾಮಣ್ಣ ಭಜಂತ್ರಿ, ಪರಶುರಾಮ ಬೋದೂರು, ಪರಶುರಾಮ ಈಳಿಗೇರ, ಹುಸೇನಸಾಬ್​ ಬಳೂಟಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net