

ಕುಶಾಲನಗರ: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಕುಶಾಲ ನಗರದಲ್ಲಿ ಆ.14 ರಂದು ಪಂಜಿನ ಮೆರವಣಿಗೆ ನಡೆಯಲಿದೆ ಎಂದು ಹಿಂದು ಜಾಗರಣ ವೇದಿಕೆಯ ಕುಶಾಲನಗರ ತಾಲೂಕು ಸಂಚಾಲಕ ಎಲ್.ಹರೀಶ್ ತಿಳಿಸಿದ್ದಾರೆ.
1947 ರ ಆಗಸ್ಟ್ 14ರ ಮಧ್ಯರಾತ್ರಿ ಭಾರತ ದೇಶ ತ್ರಿಖಂಡವಾಗಿ ಕತ್ತರಿಸಲ್ಪಟ್ಟ ಕರಾಳ ರಾತ್ರಿಯ ದುರಂತವನ್ನು ನೆನಪಿಸುತ್ತ ಕಳೆದು ಹೋದ ಭಾಗಗಳನ್ನೆಲ್ಲ ಮತ್ತೆ ಒಂದುಗೂಡಿಸುವ ಬಗ್ಗೆ ನಾಗರಿಕರಿಗೆ ನೆನಪಿಸುವ ಕಾರ್ಯಕ್ರಮ ಇದಾಗಿದೆ. ಕುಶಾಲನಗರದಲ್ಲಿ ಬೈಚನಹಳ್ಳಿ ಮಾರಿಯಮ್ಮ ದೇವಾಲಯದಿಂದ ಪಂಜಿನ ಮೆರವಣಿಗೆ ಮುಖ್ಯ ರಸ್ತೆಯಲ್ಲಿ ಸಾಗಿ ರಥಬೀದಿ, ಹಳೆಯ ಮಾರುಕಟ್ಟೆ ಮೂಲಕ ಟೌನ್ ಕಾಲೋನಿ ರಸ್ತೆಯಿಂದಾಗಿ ಐಬಿ ರಸ್ತೆ ಮೂಲಕ ರೈತ ಸಹಕಾರ ಭವನದಲ್ಲಿ ಅಂತ್ಯವಾಗಲಿದೆ. ಆ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಡಗು ಜಿಲ್ಲಾ ಸಂಪರ್ಕ ಪ್ರಮುಖ ಚಾಮೆರ ಪ್ರದೀಪ್ ಮಾತನಾಡಿ, ಜಿಲ್ಲೆಯ 6 ಕಡೆಗಳಲ್ಲಿ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದ ನಿಮಿತ್ತ ಪಂಜಿನ ಮೆರವಣಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕುಶಾಲನಗರದಲ್ಲಿ 14ರಂದು ಸಂಜೆ 7 ಗಂಟೆಗೆ ಮೆರವಣಿಗೆ ನಂತರ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಅಂದಾಜು 1000 ಸಂಖ್ಯೆಯಲ್ಲಿ ದೇಶಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸಭಾ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಡಿ.ಕೆ.ಚಿಣ್ಣಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ ಸಂಪರ್ಕ ಪ್ರಮುಖ ಯಾದವ್ ಕೃಷ್ಣ ದಿಕ್ಕೂಚಿ ಭಾಷಣ ಮಾಡಲಿದ್ದಾರೆ.
ಹಿಂದು ಜಾಗರಣಾ ವೇದಿಕೆಯ ಜಿಲ್ಲಾ ಪ್ರಮುಖ ಕೆ.ವಿ.ರಾಜೀವ್, ತಾಲೂಕು ಸಂಪರ್ಕ ಪ್ರಮುಖ ವಿ.ಎಚ್. ಪ್ರಶಾಂತ್, ಸಹ ಸಂಚಾಲಕ ಪ್ರಜ್ವಲ್ ಹಾಜರಿದ್ದರು.