

ಕುಶಾಲನಗರ: ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸುವವರಿಗೆ ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್‌ನ ಸ್ಥಾನೀಯ ಸಮಿತಿ ವತಿಯಿಂದ ಶನಿವಾರ ವ್ಯವಸ್ಥೆ ಕಲ್ಪಿಸಲಾಗಿತ್ತು.
ವರ್ತಕರಿಗೆ ತೊಂದರೆ ಕೊಡದಂತೆ ಪದಾಧಿಕಾರಿಗಳು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅಲ್ಲದೆ ಎಲ್ಲ ವರ್ತಕರನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಲಾಗುವುದೆಂದು ಭರವಸೆ ನೀಡಿದ್ದಾರೆ. ಕಾರ್ಮಿಕ ಇಲಾಖೆಯ ನಿಯಮದಂತೆ ಕೆಲಸ ಮಾಡುವವರಿಗೆ ಸಂಬಳ, ಪಿಎಫ್ ಇತ್ಯಾದಿಗಳನ್ನು ಕೊಡಬೇಕು. ಜತೆಗೆ ಸಂಬಳದ ಕ್ಯಾಶ್ ಓಚರ್ ಇಟ್ಟುಕೊಳ್ಳಬೇಕು ಎಂದು ಕಾರ್ಮಿಕ ಇಲಾಖೆಯ ಅಧಿಕಾರಿ ಲೀನಾ ತಿಳಿಸಿದರು.
ಚೇಂಬರ್ ಅಧ್ಯಕ್ಷ ಬಿ.ಅಮೃತ್‌ರಾಜ್ ಮಾತನಾಡಿ, ಕುಶಾಲನಗರ ಭಾಗದಲ್ಲಿ ಇತ್ತೀಚೆಗೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಂದ ದಂಡ ವಸೂಲಿ ಮಾಡಲಾಗುತ್ತಿದ್ದು, ಈ ಸಂಬಂಧ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲಾಗಿತ್ತು. ನಂತರ ಈ ಬಗ್ಗೆ ವರ್ತಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನೋಂದಣಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಇದೀಗ ನಿರೀಕ್ಷೆಗೂ ಮೀರಿ 100ಕ್ಕೂ ಅಧಿಕ ವರ್ತಕರು ಮತ್ತು ಅಧಿಕಾರಿಗಳು ನೋಂದಣಿ ಕಾರ್ಯಕ್ಕೆ ಸ್ಪಂದಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಚೇಂಬರ್‌ನ ಕಾರ್ಯದರ್ಶಿ ರವೀಂದ್ರ.ವಿ.ರೈ, ನಾಗೇಂದ್ರ ಪ್ರಸಾದ್, ಎಂ.ಡಿ.ರಂಗಸ್ವಾಮಿ, ಎಸ್.ಕೆ.ಸತೀಶ್, ಎನ್.ವಿ.ಬಾಬು ಇತರರು ಇದ್ದರು.