

ಕುಶಾಲನಗರ: ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾಲೂಕಿನ ಕೇಂದ್ರ ಸ್ಥಾನ ಕುಶಾಲನಗರದಲ್ಲಿಯೇ ನಡೆಸುವಂತೆ ಭಾನುವಾರ ನಡೆದ ತಾಲೂಕು ಕಸಾಪ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಪರಿಷತ್ತಿನ ವಿಶೇಷ ಆಹ್ವಾನಿತ ವಿ.ಪಿ.ಶಶಿಧರ್ ಮಾತನಾಡಿ, ಕುಶಾಲನಗರ ಹೊಸ ತಾಲೂಕು ಆಗಿರುವುದರಿಂದ ಮೊದಲನೇ ಸಮ್ಮೇಳನ ತಾಲೂಕು ಕೇಂದ್ರದಲ್ಲಿಯೇ ಆಗಬೇಕೆಂಬ ತಮ್ಮ ಇಂಗಿತ ವ್ಯಕ್ತಪಡಿಸಿದಾಗ ಸಭೆ ಒಕ್ಕೊರಲಿನಿಂದ ಶಶಿಧರ್ ಅಭಿಪ್ರಾಯವನ್ನು ಬೆಂಬಲಿಸಿ ಜಿಲ್ಲಾ ಸಮಿತಿಯ ಅನುಮೋದನೆಗೆ ಒತ್ತಾಯಿಸಿತು.
ಪರಿಷತ್ತಿನ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಮಾತನಾಡಿ, ಈ ಹಿಂದೆ ನಡೆಸಲಾಗಿರುವ ಊರುಗಳಲ್ಲಿ ಮತ್ತೆ ಎರಡನೇ ಬಾರಿ ಸಮ್ಮೇಳನ ನಡೆಸುವಂತಿಲ್ಲ. ಪ್ರತಿ ಗ್ರಾಮದಲ್ಲೂ ಕನ್ನಡದ ಕಂಪನ್ನು ಪಸರಿಸುವ ಉದ್ದೇಶ ಪರಿಷತ್ತಿನ ಆಶಯವಾಗಿದೆ. ಆದ್ದರಿಂದ ತಾಲೂಕು ಕಾರ್ಯಕಾರಿಣಿ ತೀರ್ಮಾನಿಸುವ ಸ್ಥಳವನ್ನೇ ಜಿಲ್ಲಾ ಸಮಿತಿ ಅನುಮೋದಿಸಲಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಅಸ್ಮಿತೆಯಾಗಿರುವ ಕಾರಣ ಜೀವನದಿ ಕಾವೇರಿ ತವರಿನ ಪ್ರತಿಯೊಬ್ಬರೂ ಜಿಲ್ಲೆಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಗಳ ಯಶಸ್ಸಿಗೆ ಕೈಜೋಡಿಸಬೇಕು. ಕನ್ನಡ ಭಾಷೆ, ನಾಡು-ನುಡಿ, ನೆಲ-ಜಲ, ಸಂಸ್ಕೃತಿಗಳ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಪಾಲುದಾರರಬೇಕು ಎಂದು ಹೇಳಿದರು.
ಜಿಲ್ಲಾ ಸಮಿತಿಯಲ್ಲಿ ಅನುಮೋದನೆ ಪಡೆದೊಡನೆ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಶಾಲಾ- ಕಾಲೇಜುಗಳ ಮುಖ್ಯಸ್ಥರು, ಕನ್ನಡಾಭಿಮಾನಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಸಮ್ಮೇಳನಕ್ಕೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕಾರ್ಯದರ್ಶಿ ಎಸ್.ನಾಗರಾಜು, ಖಜಾಂಚಿ ಕೆ.ವಿ.ಉಮೇಶ್, ಜಿಲ್ಲಾ ಸಮಿತಿ ನಿರ್ದೇಶಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಕೆ.ಎನ್. ದೇವರಾಜು, ಟಿ.ಜಿ. ಪ್ರೇಮಕುಮಾರ್, ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ ಸೆಬಾಸ್ಟಿನ್, ಕಾರ್ಯದರ್ಶಿ ಅನಿಲ್ ಕುಮಾರ್, ಹೆಬ್ಬಾಲೆ ಹೋಬಳಿ ಅಧ್ಯಕ್ಷ ಮಣಜೂರು ಮೂರ್ತಿ, ಕಾರ್ಯದರ್ಶಿ ಎಚ್.ಎನ್.ಸುಬ್ರಹ್ಮಣ್ಯ, ಪದಾಧಿಕಾರಿಗಳಾದ ಟಿ.ವಿ.ಶೈಲಾ, ಹೇಮಲತಾ, ಎಂ.ಎನ್. ಕಾಳಪ್ಪ, ಲೀಲಾಕುಮಾರಿ ತೊಡಿಕಾನ, ಫಿಲೋಮಿನಾ, ಟಿ.ಬಿ.ಮಂಜುನಾಥ್ ಮೊದಲಾದವರಿದ್ದರು.