

ಕುಶಾಲನಗರ: ನಗರದಲ್ಲಿ ಶಂಕಿತ ಡೆಂಘೆ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪುರಸಭೆ ವ್ಯಾಪ್ತಿಯ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಮಂಗಳವಾರ ಆರೋಗ್ಯ ಸಿಬ್ಬಂದಿ, ಮೈಸೂರು ವಲಯ ಕೀಟ ಶಾಸ್ತ್ರಜ್ಞರ ತಂಡ ಹಾಗೂ ಆಶಾ ಕಾರ್ಯಕರ್ತೆಯರು ಮನೆಗಳ ಸುತ್ತಲೂ ಶುಚಿತ್ವ ಪರಿಶೀಲಿಸಿ ನಾಗರಿಕರಿಗೆ ಜಾಗೃತಿ ಮೂಡಿಸಿದರು.
ಕೀಟಶಾಸ್ತ್ರಜ್ಞೆ ಎಂ.ರೇಖಾ ಮಾತನಾಡಿ, ಸೊಳ್ಳೆಗಳ ನಿಯಂತ್ರಣ ಮಾಡುವುದರಿಂದ ಡೆಂೆ ಹತೋಟಿಗೆ ತರಲು ಸಾಧ್ಯ. ನೀರು ಎಲ್ಲೂ ಶೇಖರಣೆ ಆಗದಂತೆ ನೋಡಿಕೊಳ್ಳಬೇಕು. ಮಲಗುವಾಗ ಸೊಳ್ಳೆ ಪರದೆ ಬಳಸಿ ಮೈತುಂಬ ಬಟ್ಟೆ ಧರಿಸಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರೇಶ್ ಮಾತನಾಡಿ, ತೀವ್ರ ಜ್ವರ, ತಲೆನೋವು, ಕಣ್ಣುಗಳ ಹಿಂಭಾಗ ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು, ಬಾಯಿ, ಮೂಗು, ಒಸಡುಗಳಿಂದ ರಕ್ತಸ್ರಾವ ಆಗುವುದು ಡೆಂಘೆ ರೋಗದ ಪ್ರಮುಖ ಲಕ್ಷಣಗಳು. ಇದಕ್ಕೆ ನಿರ್ದಿಷ್ಟ ಲಸಿಕೆ ಇಲ್ಲ, ಬದಲಿಗೆ ರೋಗ ಲಕ್ಷಣಕ್ಕೆ ಅನುಸಾರ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬಹುದು ಎಂದರು.
ಎಚ್‌ಐ ಮುಖೇಶ್, ಸಮುದಾಯ ಆರೋಗ್ಯ ಅಧಿಕಾರಿ ಮಮತಾ, ಮೈಸೂರು ವಲಯ ಕೀಟ ಸಂಗ್ರಹಕಾರ ರುದ್ರಪ್ಪ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.