

ಕುಶಾಲನಗರ: ಕುಶಾಲನಗರ ಪುರಸಭೆ ವ್ಯಾಪ್ತಿಯ 3ನೇ ವಾರ್ಡ್‌ನಲ್ಲಿ ನಿರಾಶ್ರಿತರ ನಿವೇಶನ ಬೇಡಿಕೆ ಈಡೇರಿಸುವವರಿಲ್ಲ ಎಂಬ ಕೊರಗು ಕಾಡುತ್ತಿದೆ ಎಂದು ಇಲ್ಲಿನ ನಿವಾಸಿಗಳು ಅಲವತ್ತುಕೊಂಡರು.
ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಗುರುವಾರ ಆಯೋಜಿಸಿದ್ದ ವಾರ್ಡ್ ವಾಚ್‌ನಲ್ಲಿ ಹಲವು ವರ್ಷಗಳಿಂದ ಜನಪ್ರತಿನಿಧಿಗಳು, ಅಧಿಕಾರಿಗಳ ಮುಂದಿಡುತ್ತಿರುವ ಜಾಗದ ಹಕ್ಕುಪತ್ರದ ಬೇಡಿಕೆ ಬಗ್ಗೆ ಸ್ಥಳೀಯರು ಗಮನ ಸೆಳೆದರು.
ಕುಶಾಲನಗರ ಪುರಸಭೆ ಪಂಚಾಯಿತಿಯ ವಾರ್ಡ್‌ಗಳ ಪೈಕಿ 3ನೇ ವಾರ್ಡ್ ಅತ್ಯಂತ ದೊಡ್ಡ ವಾರ್ಡ್ ಆಗಿದೆ. ವಾರ್ಡ್ ವ್ಯಾಪ್ತಿಯಲ್ಲಿ ಬದ್ರುನ್ನಿಸ ಬಡಾವಣೆ, ಶೈಲಜಾ ಬಡಾವಣೆ, ಸಿಂಗಾರಮ್ಮ ಬಡಾವಣೆ, ನೇತಾಜಿ, ಚಿಕ್ಕಣ್ಣ, ಬ್ರೆಡಿ, ಮಾರುಕಟ್ಟೆ ರಸ್ತೆ, ಮೈಸೂರು ರಸ್ತೆ ಮತ್ತು ಬಾಪೂಜಿ ಬಡಾವಣೆ (ಭಾಗಶಃ) ಸೇರುತ್ತೆ. ಇಲ್ಲಿ ಒಟ್ಟು 1,380 ಮತದಾರರಿದ್ದಾರೆ.
ಸರ್ವೇ ನಂ.165 ರಲ್ಲಿ ಅನೇಕ ಕುಟುಂಬಗಳು ಗುಡಿಸಲು ಕಟ್ಟಿಕೊಂಡು ಅನೇಕ ವರ್ಷಗಳಿಂದ ವಾಸಿಸುತ್ತಿದ್ದಾರೆ. ಹಲವು ವರ್ಷಗಳಿಂದ ನಿರಾಶ್ರಿತರು ಇರುವ ಜಾಗಕ್ಕೆ ಹಕ್ಕುಪತ್ರ ನೀಡಬೇಕೆಂದು ಮನವಿ ಮಾಡುತ್ತಿದ್ದರೂ ಯಾರು ಸಹಾಯ ಮಾಡುತ್ತಿಲ್ಲವೆಂದು ಅಲ್ಲಿಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ನೇತಾಜಿ ಬಡಾವಣೆ ಪಟ್ಟಣದ ಹಳೆಯ ಬಡಾವಣೆಗಳಲ್ಲಿ ಒಂದು. ವಾರ್ಡ್ ಸದಸ್ಯ ಪ್ರಮೋದ್ ಮುತ್ತಪ್ಪ ಅವರು ಪಂಚಾಯಿತಿ ವತಿಯಿಂದ ಅನುದಾನ ತಂದು ರಸ್ತೆಗಳಿಗೆ ಡಾಂಬರು ಹಾಕಿಸಿದ್ದರು. ಆದರೆ, ಕೆಲವೇ ದಿನಗಳಲ್ಲಿ ಯುಜಿಡಿ ಕಾಮಗಾರಿಗೆ ರಸ್ತೆ ಅಗೆದು ಹಾಳು ಮಾಡುತ್ತಿದ್ದಾರೆ. ಅದರಿಂದ ಹಲವು ರಸ್ತೆಗಳು ಗುಂಡಿಬಿದ್ದಿವೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಈ ವಾರ್ಡ್‌ನಲ್ಲಿ ಇರುವ ಹಳೆಯ ವೆಂಕಟೇಶ್ವರ ಥಿಯೇಟರ್ ಜಾಗವು ನ್ಯಾಯಾಲಯದ ಮೆಟ್ಟಿಲೇರಿದೆ. ನ್ಯಾಯಾಲಯಕ್ಕೆ ಹೋಗಿರುವ ವ್ಯಕ್ತಿಯನ್ನು ಪಂಚಾಯಿತಿಗೆ ಕರೆದು ಮಾತನಾಡಿದರೆ ಸಮಸ್ಯೆ ಬಗೆಹರಿಯುತ್ತೆ. ಅದನ್ನು ಮಾಡುವ ಮನಸ್ಥಿತಿ ಜನಪ್ರತಿನಿಧಿಗಳಿಗೆ ಇಲ್ಲದಿರುವುದು ವಿಪರ್ಯಾಸವೇ ಸರಿ. ಆ ಜಾಗದಲ್ಲಿ ಬೃಹತ್ ಕಟ್ಟಡ ಕಟ್ಟುವ ಮೂಲಕ ಪಂಚಾಯಿತಿಗೂ ಲಕ್ಷಾಂತರ ರೂ. ಆದಾಯ ಬರುವ ರೀತಿ ಮಾಡಿಕೊಳ್ಳಬಹುದು ಎನ್ನುವ ಅಭಿಪ್ರಾಯವನ್ನು ಸ್ಥಳೀಯರು ತಿಳಿಸುತ್ತಾರೆ.
ಸಿಂಗಾರಮ್ಮ ಬಡಾವಣೆ ಮುಖ್ಯರಸ್ತೆಗಿಂತ ಕೆಳಭಾಗದಲ್ಲಿ ಇರುವುದರಿಂದ ಮೇಲಿನಿಂದ ತ್ಯಾಜ್ಯ ನೀರು ಹರಿದು ಬರುತ್ತೆ. ಆದರೆ, ಅದಕ್ಕೆ ಸೂಕ್ತ ಚರಂಡಿ ಇಲ್ಲದಿರುವುದರಿಂದ ಸುತ್ತಮುತ್ತಲಿನ ಪ್ರದೇಶ ತುಂಬಾ ದುರ್ವಾಸನೆಯಿಂದ ಕುಡಿರುತ್ತದೆ. ಈ ಬಗ್ಗೆ ಪುರಸಭೆ ಗಮನಹರಿಸಬೇಕಿದೆ. ಬದ್ರುನ್ನಿಸ ಬಡಾವಣೆಯ ಉದ್ಯಾನ ಜಾಗದ ವಿಚಾರವಾಗಿ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದೆ. ಆ ಜಾಗದ ಸರ್ವೇ ಕಾರ್ಯ ಮುಗಿದಿದ್ದು, ವರದಿಗಾಗಿ ಪಂಚಾಯಿತಿ ಕಾಯುತ್ತಿದೆ.
ಚಿಕ್ಕಣ್ಣ ಬಡಾವಣೆಯ ಒಂದೇ ಒಂದು ರಸ್ತೆಯು ಇದುವರೆಗೂ ಡಾಂಬರು ಕಂಡಿಲ್ಲ. ಮಣ್ಣು ರಸ್ತೆಯಾದರಿಂದ ದಿನವೂ ಧೂಳಿನಿಂದ ಕೂಡಿರುತ್ತೆ. ಮಳೆ ಬಂದರೆ ಕೇಸರುಮಯವಾಗಿರುತ್ತೆ. ಪಟ್ಟಣದ ಅತ್ಯಂತ ದುಬಾರಿ ಬೆಲೆಯಿರುವ ಬಡಾವಣೆಗಳಲ್ಲಿ ಒಂದು ಈ ಚಿಕ್ಕಣ್ಣ ಬಡಾವಣೆ. ಆದರೂ ಇಂತಹ ದುಸ್ಥಿತಿ ಇದೆ.
ಸಿಂಗಾರಮ್ಮ ಬಡಾವಣೆ ರಸ್ತೆಗಳನ್ನು ಸದಸ್ಯ ಪ್ರಮೋದ್ ಮುತ್ತಪ್ಪ ಆಯ್ಕೆಯಾದ ಮೇಲೆ ಮಾಡಿಸಿದ್ದಾರೆ. ಮೇಲ್ಭಾಗದಿಂದ ಬರುವ ತ್ಯಾಜ್ಯ ನೀರು ಸರಾಗವಾಗಿ ಹರಿಯಲು ಚರಂಡಿಯ ಅವಶ್ಯಕತೆ ಇದೆ. ಅದನ್ನು ಸಾಧ್ಯವಾದಷ್ಟು ಬೇಗ ಮಾಡಿಸಲು ಸಂಬಂಧಿಸಿದ ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇವೆ.
ಬಿ.ಸಿ. ರಮೇಶ್ ನಿವೃತ್ತ ಯೋಧ, ಸಿಂಗಾರಮ್ಮ ಬಡಾವಣೆ, ಕುಶಾಲನಗರ
ನೇತಾಜಿ ಬಡಾವಣೆಯಲ್ಲಿ ಬಹುತೇಕ ಕೆಲಸಗಳನ್ನು ಮಾಡಿಸಿದ್ದಾರೆ. ರಸ್ತೆಗಳು ಮಾತ್ರ ಯುಜಿಡಿ ಕಾಮಗಾರಿಯಿಂದ ಹಾಳಾಗಿದೆ. ಇಲಾಖೆಗಳ ನಡುವೆ ಸಮನ್ವಯ ಕೊರತೆಯಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ.
ಎಸ್.ಎನ್. ಪ್ರವೀಣ್ಕುಮಾರ್ ಉದ್ಯಮಿ, ನೇತಾಜಿ ಬಡಾವಣೆ, ಕುಶಾಲನಗರ
ಏಳು ಕುಟುಂಬಗಳು ಕಳೆದ 70ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿದ್ದೇವೆ. ಇದುವರೆಗೂ ಯಾರಿಗೂ ಕನಿಕರ ಬಂದಿಲ್ಲ. ಸ್ಮಶಾನದಿಂದ ಇಲ್ಲಿಯ ಮಾಂಸದಂಗಡಿಗಳಿಗೆ ಕೊಡುತ್ತಿರುವ ನೀರನ್ನೇ ನಾವು ಬಳಸುತ್ತಿದ್ದೇವೆ. ವಿದ್ಯುತ್ ಸರಬರಾಜು ಕೇಂದ್ರದ ಸಮೀಪದಲ್ಲೇ ಇರುವ ನಮಗೆ ಮನೆಯಲ್ಲಿ ಕರೆಂಟ್ ಇಲ್ಲ. ಯಾವುದೇ ಮೂಲಸೌಕರ್ಯ ಕೊಡದೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಸತಾಯಿಸುತ್ತಿದ್ದಾರೆ.
ರವಿ ಸ್ಥಳೀಯ ನಿವಾಸಿ, ಬಾಪೂಜಿ ಬಡಾವಣೆ, ಕುಶಾಲನಗರ
ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲದಿರುವುದರಿಂದ ತ್ಯಾಜ್ಯ ನೀರು ಅಲ್ಲಲ್ಲಿ ನಿಂತು ದುರ್ವಾಸನೆ ಬೀರುತ್ತಿದೆ. ಸದಸ್ಯರನ್ನು ಕೇಳಿದರೆ ಪಂಚಾಯಿತಿಯಲ್ಲಿ ಅನುದಾನವಿಲ್ಲ ಎನ್ನುತ್ತಾರೆ. ನಮಗೆ ಇದು ಒಂದು ರೀತಿಯ ಶಾಪವಾಗಿದೆ.
ಆರ್.ಪದ್ಮಾವತಿ ಗೃಹಿಣಿ, ಸಿಂಗಾರಮ್ಮ ಬಡಾವಣೆ
ಪಂಚಾಯಿತಿಗೆ ಸಮರ್ಪಕ ಅನುದಾನ ಬರುತ್ತಿಲ್ಲ. ಅಲ್ಪಸ್ವಲ್ಪ ಬಂದಾಗ ಎಲ್ಲ ವಾರ್ಡಗಳಿಗೂ ಕೊಡಬೇಕಾಗಿರುತ್ತೆ. ಬಂದಿರುವ ಹಣದಲ್ಲಿ ತುರ್ತು ಇರುವ ಕಾಮಗಾರಿ ಮಾಡಿಸಿದ್ದೇನೆ. ಇನ್ನು ಅವಶ್ಯವಿರುವ ಕಾಮಗಾರಿಗಳನ್ನು ಸರ್ಕಾರದಿಂದ ಹಣ ಬಂದ ತಕ್ಷಣ ಮಾಡಿಸುತ್ತೇನೆ. ಕಾಂಗ್ರೆಸ್ ಸರ್ಕಾರವಿದ್ದಾಗ ನಮ್ಮ ನಾಯಕರ ಪರಿಶ್ರಮದಿಂದ ನಗರೋತ್ಥಾನ ಯೋಜನೆಯಲ್ಲಿ 5 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿಸಿದ್ದೆವು. ಈಗ ಆ ರೀತಿಯ ವಿಶೇಷ ಹಣ ಹೋಗಲಿ, ವಾರ್ಷಿಕವಾಗಿ ಬರಬೇಕಿರುವ ಹಣವೇ ಬರುತ್ತಿಲ್ಲ.
ಪ್ರಮೋದ್ ಮುತ್ತಪ್ಪ 3ನೇ ವಾರ್ಡ ಸದಸ್ಯ, ಕುಶಾಲನಗರ ಪುರಸಭೆ