

ಮೈಸೂರು: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಯ ಸಂದರ್ಭದಲ್ಲಿ ಸಿಡಿಸಲಾಗುವ ಕುಶಾಲತೋಪಿನ ಶಬ್ದದ ಪರಿಚಯ ಮಾಡಿಸುವ ಎರಡನೇ ತಾಲೀಮು ಶುಕ್ರವಾರ ಯಶಸ್ವಿಯಾಗಿ ನಡೆಯಿತು.
ಅಂಬಾರಿ ಆನೆ ‘ಅಭಿಮನ್ಯು’ ನೇತೃತ್ವದ 12 ಆನೆಗಳ ಪೈಕಿ ಒಂದೆರಡು ಆನೆ ಹೊರತುಪಡಿಸಿ ಉಳಿದ ಆನೆಗಳು ಯಾವುದೇ ಅಂಜಿಕೆ, ಬೆದರಿಕೆ ಇಲ್ಲದೆ ತಾಲೀಮಿನಲ್ಲಿ ಭಾಗವಹಿಸಿದವು. ಧನಂಜಯ ಹಾಗೂ ಪ್ರಥಮ ಬಾರಿಗೆ ಆಗಮಿಸಿರುವ ಪಾರ್ಥಸಾರಥಿ ಆನೆಗಳು ಕೊಂಚ ಬೆದರಿದರೆ, ಭೀಮ ಸೇರಿದಂತೆ ಇನ್ನಿತರ ಆನೆಗಳು 7 ಫಿರಂಗಿಗಳಿಂದ ಮೂರು ಸುತ್ತಿನಲ್ಲಿ ಹೊರ ಹೊಮ್ಮಿದ 21 ಕುಶಾಲತೋಪಿನ ಶಬ್ದಕ್ಕೆ ಕೊಂಚವೂ ಬೆದರದೆ ನಿಂತಿದ್ದು ಗಮನ ಸೆಳೆಯಿತು.
ಆನೆಗಳ ಜತೆಗೆ ಅಶ್ವರೋಹಿ ಪಡೆಯ 43 ಕುದುರೆಗಳೂ ತಾಲೀಮಿನಲ್ಲಿ ಭಾಗವಹಿಸಿದ್ದು, ಕೆಲವು ಕುದುರೆಗಳು ಬೆದರಿದರೂ ಸವಾರರು ಅವುಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಕಾಡಿನಿಂದ ನಾಡಿಗೆ ಬಂದಿರುವ ಆನೆಗಳನ್ನು ನಗರದ ವಾತಾವರಣಕ್ಕೆ ಹೊಂದಿಸುವುದರ ಜತೆಗೆ, ಜಂಬೂಸವಾರಿಯ ದಿನ ಸಿಡಿಸುವ ಕುಶಾಲತೋಪಿನ ಶಬ್ದಕ್ಕೆ ಒಗ್ಗಿಸುವ ಸಲುವಾಗಿ ಹಲವು ಸುತ್ತಿನ ತಾಲೀಮು ನಡೆಸಲಾಗುತ್ತದೆ.
ಈ ಹಿಂದೆ ನಡೆದ ಪ್ರಥಮ ತಾಲೀಮಿನಲ್ಲಿ ಅರ್ಜುನ, ಅಭಿಮನ್ಯು, ಗೋಪಾಲಸ್ವಾಮಿ, ಮಹೇಂದ್ರ, ಗೋಪಿ, ಚೈತ್ರಾ, ಕಾವೇರಿ ಆನೆಗಳು ಭಾರಿ ಶಬ್ದಕ್ಕೆ ಬೆಚ್ಚಿದ್ದವು. ಆದರೆ ಎರಡನೇ ಹಂತದ ತಾಲೀಮಿನಲ್ಲಿ ಧನಂಜಯ ಮತ್ತು ಪಾರ್ಥಸಾರಥಿ ಹೊರತಾಗಿ ಎಲ್ಲ ಆನೆಗಳು ಭಾರಿ ಶಬ್ದಕ್ಕೆ ಹೊಂದಿಕೊಂಡಿರುವುದು ಕಂಡುಬಂದಿತು.
12 ಆನೆಗಳು ಭಾಗಿ:
ದಸರಾ ಉತ್ಸವದಲ್ಲಿ ಪಾಲ್ಗೊಂಡಿರುವ ‘ಲಕ್ಷ್ಮೀ’ ಇತ್ತೀಚೆಗೆ ಮರಿಗೆ ಜನ್ಮ ನೀಡಿರುವುದರಿಂದ ಆ ಆನೆಯನ್ನು ಸಿಡಿಮದ್ದು ತಾಲೀಮಿನಿಂದ ಹೊರಗಿಡಲಾಗಿತ್ತು. ಅಲ್ಲದೆ, ಲಕ್ಷ್ಮೀ ಜತೆ ಚೈತ್ರಾಳನ್ನೂ ಇರಿಸಿರುವುದರಿಂದ ಉಳಿದ 12 ಆನೆಗಳು ತಾಲೀಮಿನಲ್ಲಿ ಭಾಗಿಯಾಗಿದ್ದವು. ಅಂಬಾರಿ ಆನೆ ಅಭಿಮನ್ಯು, ಅರ್ಜುನ, ಗೋಪಾಲಸ್ವಾಮಿ, ಮಹೇಂದ್ರ, ಭೀಮ, ಧನಂಜಯ, ಗೋಪಿ, ಸುಗ್ರೀವ, ಶ್ರೀರಾಮ, ಪಾರ್ಥಸಾರಥಿ ಹಾಗೂ ಕುಮ್ಕಿ ಆನೆಗಳಾದ ಕಾವೇರಿ, ವಿಜಯಾ ಆನೆಗಳು ತಾಲೀಮಿನಲ್ಲಿದ್ದವು.