

ಬಾಗಲಕೋಟೆ: ಕುಶಲಕರ್ಮಿಗಳಿಗೆ ಹೊಲಿಗೆ, ಬಡಿಗತನ, ಹಾಗೂ ಧೋಬಿ ವೃತ್ತಿಯ ಸುಧಾರಿತ ಸಲಕರಣೆಗಳನ್ನು ಬಾಗಲಕೋಟೆ ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವಾಯ್.ಮೇಟಿ ರವಿವಾರ ವಿತರಣೆ ಮಾಡಿದರು.
ನವನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಗ್ರಾಮೀಣ ಕೈಗಾರಿಕೆ ಇಲಾಖೆ ವತಿಯಿಂದ ವೃತ್ತಿನಿತರ ಕುಶಲಕರ್ಮಿಗಳಿಗೆ ಸುಧಾರಿತ ಸಲಕರಣೆಗಳನ್ನು ವಿತರಿಸಿ ಮಾತನಾಡಿದ ಅವರು ಸರಕಾರ ವಿವಿಧ ಕುಶಲಕರ್ಮಿಗಳು ತಮ್ಮ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವೃತ್ತಿಯ ಸುಧಾರಿತ ಸಲಕರಣೆಗಳನ್ನು ಸರಕಾರ ನೀಡುತ್ತಿದೆ. ಇವುಗಳ ಸದುಪಯೋಗ ಪಡೆದುಕೊಳ್ಳಬೇಕು. ನಿಜವಾದ ಫಲಾನುಭವಿಗಳಿಗೆ ಯೋಜನೆಯ ಲಾಭ ದೊರೆಯುವಂತಾಗಬೇಕು. ಇಲಾಖೆಯವರು ವಿವಿಧ ವೃತ್ತಿಯ ಅರ್ಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯವಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಾಗಲಕೋಟೆ ಮತಕ್ಷೇತ್ರದ 30 ಅರ್ಹ ಫಲಾನುಭವಿಗಳಿಗೆ ಹೊಲಿಗೆಯಂತ್ರ, 11 ಫಲಾನುಭವಿಗಳಿಗೆ ಬಡಿತನದ ಉಪಕರಣ ಹಾಗೂ 8 ಜನ ಫಲಾನುಭವಿಗಳಿಗೆ ಧೋಬಿ ವೃತ್ತಿಯ ಸುಧಾರಿತ ಸಲಕರಣೆಗಳನ್ನು ವಿತರಿಸಲಾಯಿತು. ಸಲಕರಣೆಗಳು 8 ಸಾವಿರ ರೂ.ಗಳ ಮಿತಿಗೆ ಒಳಪಟ್ಟಿದ್ದವು.
ಕಾರ್ಯಕ್ರಮದಲ್ಲಿ ಜಿ.ಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಗ್ರಾಮೀಣ ಕೈಗಾರಿಕೆ ಇಲಾಖೆಯ ಉಪನಿರ್ದೇಶಕ ಸಿದ್ದರಾಯ ಬಳೂರಗಿ, ತಾಲೂಕಾ ಕೈಗಾರಿಕಾ ವಿಸ್ತರಣಾಧಿಕಾರಿ ಹನಮೇಶಿ ಮೈಗೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.