ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಅಕ್ಷರದೊಂದಿಗೆ ಅನ್ನ ದಾಸೋಹ

mysore
Published on

ಮೈಸೂರು

ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾರಂಭ ಮಾಡಿರುವ ‘ಪದವಿ ಅಕ್ಷಯ ದಾಸೋಹ’ ಯೋಜನೆಗೆ ಶನಿವಾರ ಚಾಲನೆ ನೀಡಲಾಯಿತು.

ಗ್ರಾಮೀಣ ಪ್ರದೇಶದಿಂದ ಬರುವ 80 ಹೆಣ್ಣು ಮಕ್ಕಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದ್ದು, ಕಾಲೇಜಿನ ಪ್ರಾಧ್ಯಾಪಕರು, ಅಧ್ಯಾಪಕೇತರರೇ ಸೇರಿ ಈ ಯೋಜನೆಗೆ ವೈಯಕ್ತಿಕವಾಗಿ ದೇಣಿಗೆ ನೀಡಿರುವುದು ವಿಶೇಷ. ಇಸ್ಕಾನ್‌ನ ಅಕ್ಷಯ ಪಾತ್ರೆ ಯೋಜನೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಅವರು ಮಧ್ಯಾಹ್ನದ ಊಟ ಪೂರೈಸುತ್ತಾರೆ.

ಸಾಮಾನ್ಯವಾಗಿ ಎಲ್ಲ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿರುತ್ತದೆ. ಆದರೆ, ಈ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆ. ಅಲ್ಲದೇ ಈ ಕಾಲೇಜಿಗೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳೇ ಹೆಚ್ಚು. ಕೊಠಡಿಗಳ ಕೊರತೆ ಇರುವುದರಿಂದ ಪಾಳಿಯಲ್ಲಿ ತರಗತಿ ನಡೆಸಲಾಗುತ್ತದೆ.

ಹೀಗಾಗಿ, ಬೆಳಗ್ಗೆ 8 ಗಂಟೆಗೆ ತರಗತಿ ಇದ್ದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಬೆಳಗ್ಗೆ 6ಕ್ಕೆ ಮನೆಯಿಂದ ಹೊರಡುತ್ತಾರೆ. ಎಷ್ಟೋ ಯುವತಿಯರು ಬೆಳಗಿನ ಉಪಾಹಾರ ಮಾಡಿರುವುದಿಲ್ಲ. ಮಧ್ಯಾಹ್ನದ ಊಟವನ್ನು ಮಾಡುವುದಿಲ್ಲ.

ಇದನ್ನು ಅರಿತ ಪ್ರಾಂಶುಪಾಲ ಡಾ.ಪುಟ್ಟರಾಜ ಅವರು ತಮ್ಮ ಕಾಲೇಜಿನ ಅಧ್ಯಾಪಕರು, ಅಧ್ಯಾಪಕೇತರರ ಬಳಿ ಸಮಾಲೋಚಿಸಿ, ವೈಯಕ್ತಿಕ ದೇಣಿಗೆ ಮೂಲಕ ಮಧ್ಯಾಹ್ನದ ಊಟ ಯೋಜನೆ ಆರಂಭಿಸಬಹುದೇ ಎಂದು ಕೇಳಿದರು. ಇದಕ್ಕೆ ಎಲ್ಲರೂ ಸಮ್ಮತಿಸಿದರು. ನಂತರ ಶಾಸಕ ಟಿ.ಎಸ್.ಶ್ರೀವತ್ಸ ಅಧ್ಯಕ್ಷತೆಯ ಸಿಡಿಸಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಅಲ್ಲಿಯೂ ಒಪ್ಪಿಗೆ ದೊರೆಯಿತು.

ಮೊದಲ ಹಂತದಲ್ಲಿ ಗ್ರಾಮೀಣ ಪ್ರದೇಶದಿಂದ ಬರುವ 80 ವಿದ್ಯಾರ್ಥಿನಿಯರಿಗೆ ಮಧ್ಯಾಹ್ನದ ಊಟ ಪೂರೈಸುವ ಯೋಜನೆ ರೂಪಿಸಲಾಯಿತು. ಸರ್ಕಾರಿ ಕಾಲೇಜುಗಳಲ್ಲಿ ಈ ರೀತಿ ಆಹಾರ ಪೂರೈಸಬೇಕಾದರೆ ಗುಣಮಟ್ಟದ ಪರೀಕ್ಷೆ ನಡೆಯಬೇಕು. ಇಸ್ಕಾನ್‌ನ ಅಕ್ಷಯ ಫೌಂಡೇಷನ್ ಈಗಾಗಲೇ ರಾಜ್ಯದ ವಿವಿಧ ಶಾಲೆಗಳಿಗೆ ಮಧ್ಯಾಹ್ನದ ಊಟ ನೀಡುತ್ತಿರುವುದರಿಂದ ಅವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಈ ಸೆಮಿಸ್ಟರ್‌ಗೆ ಆಗುವಷ್ಟು ಹಣವನ್ನು ಪಾವತಿಸಿದ್ದು, ಮಧ್ಯಾಹ್ನ ಒಂದು ಗಂಟೆಗೆ ಅವರು ಊಟ ನೀಡುವರು. ಸರದಿಯಂತೆ ಪ್ರಾಧ್ಯಾಪಕರ ಉಸ್ತುವಾರಿಯಲ್ಲಿ ತರಗತಿ ಪ್ರತಿನಿಧಿಗಳ ನೇತೃತ್ವದಲ್ಲಿ ಆಯ್ದ ವಿದ್ಯಾರ್ಥಿನಿಯರಿಗೆ ಊಟ ವಿತರಿಸಲಾಗುತ್ತದೆ.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶೀಘ್ರ ಕ್ಯಾಂಟೀನ್ ಸೌಲಭ್ಯ ಕಲ್ಪಿಸಲಾಗುವುದು. ಜತೆಗೆ ಸಿಡಿಸಿ ಸದಸ್ಯರೊಂದಿಗೆ ಸೇರಿ ಮಧ್ಯಾಹ್ನದ ಊಟ ಯೋಜನೆಯನ್ನು ಇತರರಿಗೂ ಯಾವ ರೀತಿ ವಿಸ್ತರಿಸಬೇಕು ಎಂಬ ಬಗ್ಗೆ ಆಲೋಚಿಸಲಾಗುವುದು ಎಂದು ಹೇಳಿದರು.

ಪ್ರಾಂಶುಪಾಲ ಡಾ.ಪುಟ್ಟರಾಜ ಮಾತನಾಡಿ, ಪ್ರಾಥಮಿಕ ಶಾಲೆಯಿಂದ ಹಿಡಿದು ಪ್ರೌಢಶಾಲೆಯವರೆಗೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವ ರಾಜ್ಯ ಸರ್ಕಾರ ಪಿಯುಸಿ ಹಾಗೂ ಪದವಿ ಹಂತದಲ್ಲಿಯೂ ಮಧ್ಯಾಹ್ನದ ಊಟ ನೀಡುವ ಯೋಜನೆ ರೂಪಿಸಬೇಕು. ಇದರಿಂದ ಎಲ್ಲ ವಿದ್ಯಾರ್ಥಿಗಳಿಗೆ ಅದರಲ್ಲೂ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಿಡಿಸಿ ಸದಸ್ಯರಾದ ಲಖನ್ ನಾಯಕ್, ಜಗದೀಶ್, ಡಾ.ಅಶ್ವಿನಿ, ರಮೇಶ್, ಲಿಂಗಣ್ಣ ಮಾತನಾಡಿದರು. ಐಕ್ಯೂಎಸಿ ಸಂಚಾಲಕ ಮುರಳಿ, ಪತ್ರಾಂಕಿತ ವ್ಯವಸ್ಥಾಪಕ ಎಂ. ವಿದ್ಯಾರಣ್ಯ, ಲಯನ್ ವಿಶ್ವನಾಥ್, ಮನೋಜ್, ರಚನಾ, ಡಾ.ಪಿ.ಬೆಟ್ಟೇಗೌಡ, ಡಾ.ಗುರುಸ್ವಾಮಿ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net