

ಹಾಸನ: ಕುವೆಂಪು ಸಾಹಿತ್ಯದ ಓದಿನಿಂದ ಹೃದಯವಂತಿಕೆ, ವೈಚಾರಿಕ ಪ್ರಜ್ಞೆ ಬೆಳೆಯುತ್ತದೆ ಎಂದು ಎನ್‌ಡಿಆರ್‌ಕೆ ಪ್ರಥಮದರ್ಜೆ ಕಾಲೇಜಿನ ವಿಶ್ರಾಂತ ಸಹ ಪ್ರಾಧ್ಯಾಪಕ ಎ.ಜೆ. ಶಾಂತೇಗೌಡ ಅವರು ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು, ಸ್ವಾಯತ್ತ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಕುವೆಂಪು ಅವರ 119ನೇ ಜನ್ಮ ದಿನದ ಅಂಗವಾಗಿ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆಡುಕಿನಿಂದ ಒಳಿತಿನೆಡೆಗೆ ಕುವೆಂಪು ಸಾಹಿತ್ಯ ನೆಡೆಯುತ್ತದೆ. ಜನ್ಮ ನೀಡಿದ ತಂದೆ-ತಾಯಿಯ ಬಗ್ಗೆ ಅಪಾರವಾದ ಅಭಿಮಾನ ಮತ್ತು ಗೌರವವನ್ನು ಕುವೆಂಪು ಇಟ್ಟುಕೊಂಡಿದ್ದರು. ಪ್ರತಿಯೊಂದರಲ್ಲಿಯೂ ಭಗವಂತನ ಸಾಕ್ಷಾತ್ಕಾರವನ್ನು ಕಂಡವರು ಕುವೆಂಪು. ಪ್ರಕೃತಿಯನ್ನು ಕುರಿತೇ ಅದೇಷ್ಟೋ ಕೃತಿಗಳನ್ನು ರಚಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಾಸ್ತಾವಿಕ ಭಾಷಣ ನುಡಿಗಳನ್ನಾಡಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಎಚ್.ಡಿ. ದೇವರಾಜು, ಸಂಸ್ಕೃತಿಯ ನಾವಿಕ ಮತ್ತು ಸಾಂಸ್ಕೃತಿಕ ಹರಿಕಾರ ಕುವೆಂಪು. ನೆಲ, ಜಲ, ಭಾಷೆಯ ವಿಚಾರದಲ್ಲಿ ಎಂದಿಗೂ ಧಕ್ಕೆಯಾಗದಂತೆ ಮುಂಚೂಣಿಯಲ್ಲಿ ಇದ್ದವರು. ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದವರಲ್ಲಿ ಇವರು ಪ್ರಮುಖರು. ಶಾಸ್ತ್ರಗಳು ನಂತರ ಮಾನವೀಯತೆ ಮೊದಲು ಎಂದು ಸಾರಿದವರು ಎಂದು ಸ್ಮರಿಸಿದರು.
ಪ್ರಾಂಶುಪಾಲ ಡಾ. ಎಂ.ಬಿ ಇರ್ಷಾದ್ ಮಾತನಾಡಿ, ಕುವೆಂಪು ಅವರ ಸಾಹಿತ್ಯದ ಗುರುತ್ವಾಕರ್ಷಣ ಶಕ್ತಿ ಬಹಳ ದೊಡ್ಡದಿತ್ತು. ಸಮನ್ವಯ ದೃಷ್ಟಿಕೋನ ಇಟ್ಟುಕೊಂಡು ಸಾಹಿತ್ಯ ರಚನೆಗೆ ಮುಂದಾದವರು ಕುವೆಂಪು. ಆಧುನಿಕ ಬಸವಣ್ಣ ಎಂದೇ ಅವರನ್ನು ಗುರುತಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ಕುವೆಂಪು ಪುತ್ಥಳಿಗೆ ಕಾರಣೀಭೂತರಾದ ಆಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಕಲಾ ಕಾಲೇಜಿನಲ್ಲಿ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದ ಟಿ.ಪಿ.ಪುಟ್ಟರಾಜು ಅವರನ್ನು ನೆನೆದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಮುಂಭಾಗ ಪ್ರತಿಷ್ಠಾಪಿಸಲಾಗಿರುವ ಕುವೆಂಪು ಪುತ್ಥಳಿಗೆ ಗಣ್ಯರು ಪುಷ್ಪಾರ್ಚನೆ ಮಾಡಿ, ಕುವೆಂಪು ಅವರ ಗೀತೆಯನ್ನು ಗಾಯನ ಮಾಡಿದರು.
ಕಾರ್ಯಕ್ರಮದಲ್ಲಿ ಪರೀಕ್ಷಾ ನಿಯಂತ್ರಕರಾದ ಪ್ರೊ. ಕೆ.ಡಿ.ಮುರಳೀಧರ , ಪತ್ರಾಂಕಿತ ವ್ಯವಸ್ಥಾಪಕರಾದ ಕೆ.ಟಿ. ಸತ್ಯಮೂರ್ತಿ, ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಬಿ.ಎಚ್.ಶ್ರೀನಿವಾಸ್ , ಪ್ರೊ. ಕೆ.ಎಸ್. ದಿನೇಶ್, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಪ್ರಮೀಳಾ, ಪ್ರೊ. ಅನುರಾಧ ಎಲ್ಲಾ ವಿಭಾಗದ ಪ್ರಾಧ್ಯಾಪಕರು, ಉಪನ್ಯಾಸಕರು, ಆಡಳಿತ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.