

ಚಿತ್ರದುರ್ಗ: ಪ್ರಗತಿ ವಿಚಾರವಾಗಿ ರಾಷ್ಟ್ರಕವಿ ಕುವೆಂಪು ಅವರು ನೀಡಿದ ಸಂದೇಶಗಳು ಸಮಾಜ ಮಾತ್ರವಲ್ಲ, ಪ್ರತಿಯೊಬ್ಬರ ಬಾಳಿಗೂ ದಾರಿದೀಪ ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಸಲಹೆ ನೀಡಿದರು.
ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ವಿಶ್ವಮಾನವ ದಿನಾಚರಣೆ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ವೈಚಾರಿಕ ಚಿಂತನೆ ಬೆಳೆಸುವ ಉದ್ದೇಶ ಹೊಂದಿದೆ. ಯಾವುದೇ ಭೇದ-ಭಾವವಿಲ್ಲದೆ, ಎಲ್ಲರೂ ವಿಶ್ವ ಮಾನವರಾಗಬೇಕು. ಮೌಢ್ಯ ತೊರೆದು ರಾಷ್ಟ್ರವನ್ನು ಪ್ರಗತಿಯತ್ತ ಕೊಂಡೊಯ್ಯಲು ದೃಢ ಸಂಕಲ್ಪ ಮಾಡಬೇಕು ಎಂದರು.
ಕನ್ನಡ ಉಪನ್ಯಾಸಕ ಡಾ.ಬಿ.ಎಂ.ಗುರುನಾಥ್ ಮಾತನಾಡಿ, ಕೀರ್ತಿ ಮಾನವರನ್ನು ಅಹಂಕಾರಿಯನ್ನಾಗಿಸುತ್ತದೆ ಎಂದು ಕುವೆಂಪು ಭಾವಿಸಿದ್ದರು. ಅವರ ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ವಿಶ್ವ ಸಾಹಿತ್ಯ ಚರಿತ್ರೆಯಲ್ಲಿ ಶ್ರೇಷ್ಠ ಸ್ಥಾನ ಪಡೆದಿವೆ ಎಂದು ಬಣ್ಣಿಸಿದರು.
ಕುವೆಂಪು ತಮ್ಮ ಮಹಾನ್ ಕಾವ್ಯ ಶ್ರೀರಾಮಯಣ ದರ್ಶನಂ ಅನ್ನು ಭಕ್ತಿ, ಗೌರವ ಪೂರಕವಾಗಿ ಗುರು ಟಿ.ಎಸ್.ವೆಂಕಣ್ಣಯ್ಯ ಅವರಿಗೆ ಅರ್ಪಿಸಿರುವುದು ಚಿತ್ರದುರ್ಗ ಜಿಲ್ಲೆಯ ಜನರಿಗೆ ಹೆಮ್ಮೆಯ ಸಂಗತಿ. ಅವರ ಕನ್ನಡ ಪ್ರೇಮ ಅಗಾಧವಾದದು. ನಾಡಿನ ಹೋರಾಟದಲ್ಲಿ ಅವರ ದಿಟ್ಟ ನಿಲುವು ನಮೆಗೆಲ್ಲರಿಗೂ ಮಾದರಿಯಾಗಿದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಹುರುಳಿ ಎಂ.ಬಸವರಾಜ್ ಮಾತನಾಡಿ, ಎಲ್ಲರನ್ನೂ ವಿಶ್ವಮಾನವನಾಗಿ ರೂಪಿಸುವುದೇ ಶಿಕ್ಷಣದ ಪರಮ ಆದ್ಯತೆಯಾಗಬೇಕೆಂದು ಹೊಸ ಪರಿಕಲ್ಪನೆ ಕಟ್ಟಿಕೊಟ್ಟ ಕುವೆಂಪು ಆದರ್ಶ ಪರಂಪರೆಗೆ ನಾಂದಿ ಹಾಡಿದ ಮಹನೀಯರು ಎಂದು ಬಣ್ಣಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹರೀಶ್, ಪಿಎಂಜಿಎಸ್‌ವೈ ಯೋಜನಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಶ್ರೀಧರ್, ನಗರಸಭೆ ವ್ಯವಸ್ಥಾಪಕಿ ಮಂಜುಳಾ, ಕನ್ನಡ ಉಪನ್ಯಾಸಕ ತಿಪ್ಪೇಸ್ವಾಮಿ, ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಇತರರಿದ್ದರು.