ಕುವೆಂಪು ವಿವಿಯಿಂದ ಕೆಳದಿ ಚೆನ್ನಮ್ಮಾಜಿ ಪೀಠ ಸ್ಥಾಪನೆಗೆ ಸಿದ್ಧತೆ: ಕುಲಪತಿ ಡಾ. ವೀರಭದ್ರಪ್ಪ

SGR WEB 2
Published on

ಸಾಗರ: ಕೆಳದಿ ರಾಣಿ ಚೆನ್ನಮ್ಮಾಜಿ ತನ್ನ ಆಡಳಿತ ವೈಖರಿಯಿಂದ ಹೆಸರಾದವರು. ಇತಿಹಾಸದಲ್ಲಿ ಅವರನ್ನು ಸ್ಮರಿಸುವ ಮತ್ತು ಮಾನ್ಯತೆ ನೀಡುವ ಕೆಲಸ ವ್ಯವಸ್ಥಿತವಾಗಿ ನಡೆದಿಲ್ಲ. ಬರುವ ವರ್ಷ ಅಧ್ಯಯನ ಪೀಠ ಸ್ಥಾಪಿಸಿ, ರಾಣಿ ಚೆನ್ನಮ್ಮಾಜಿ ಸಾಧನೆ ದೇಶಾದ್ಯಂತ ಸ್ಮರಿಸುವ ನಿಟ್ಟಿನಲ್ಲಿ ಕುವೆಂಪು ವಿಶ್ವವಿದ್ಯಾಲಯ ಕಾರ್ಯಯೋಜನೆ ರೂಪಿಸಿದೆ ಎಂದು ಕುಲಪತಿ ಡಾ. ಬಿ.ಪಿ.ವೀರಭದ್ರಪ್ಪ ಮಾಹಿತಿ ನೀಡಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ವೀರಶೈವ ಸಮಾಜದಿಂದ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಕೆಳದಿ ಚೆನ್ನಮ್ಮ ಕುರಿತು ಮಾತನಾಡಿದರು. ರಾಣಿ ಚೆನ್ನಮ್ಮಾಜಿ ಕುರಿತು ಅಧ್ಯಯನ ಪೀಠ ಸ್ಥಾಪಿಸುವ ಎಲ್ಲ ಸಿದ್ಧತೆ ನಡೆದಿದೆ. ಕುವೆಂಪು ವಿವಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವತ್ತ ಗಮನಹರಿಸಲಾಗುವುದು ಎಂದರು.

ಕೆಳದಿ ಸಂಸ್ಥಾನ ಕುರಿತು ಉಪನ್ಯಾಸ ನೀಡಿದ ಇತಿಹಾಸ ಸಂಶೋಧಕ ಡಾ.ಕೆಳದಿ ವೆಂಕಟೇಶ್ ಜೋಯ್ಸ, ಕಾಶಿ ಅಭಿವೃದ್ಧಿ ಹೊಂದುವಲ್ಲಿ ಕೆಳದಿ ರಾಜ ದೊಡ್ಡ ಸಂಕಣ್ಣನಾಯಕ ನೀಡಿದ ಕೊಡುಗೆ ಅಪಾರ. ಮಹಾರಾಷ್ಟ್ರ ಉಳಿಸಲು ರಾಣಿ ಚೆನ್ನಮ್ಮಾಜಿ ತನ್ನ ರಾಜ್ಯದಲ್ಲಿ ರಾಜಾರಾಮನಿಗೆ ಆಶ್ರಯ ನೀಡಿದ್ದರು. ಆದರೆ ಕೆಳದಿ ಸಂಸ್ಥಾನ ಮತ್ತು ರಾಣಿ ಚೆನ್ನಮ್ಮಾಜಿ ಬಗ್ಗೆ ಇತಿಹಾಸಕಾರರು ಪರಿಪೂರ್ಣ ಬೆಳಕು ಚೆಲ್ಲಲಿಲ್ಲ. ರಾಣಿ ಚೆನ್ನಮ್ಮಾಜಿಯ 350ನೇ ಪಟ್ಟಾಭಿಷೇಕವನ್ನು ರಾಣಿ ಚೆನ್ನಮ್ಮಾಜಿ ಜಯಂತಿಯಾಗಿ ರಾಜ್ಯವ್ಯಾಪಿ ಆಚರಿಸುವ ಬೇಡಿಕೆ ಸರ್ಕಾರದ ಮುಂದೆ ಇರಿಸಲಾಗಿದೆ. ಮುಂದಿನ ವರ್ಷದಿಂದ ಅದನ್ನು ಅನುಷ್ಠಾನಕ್ಕೆ ತರುವತ್ತ ಸರ್ಕಾರ ಗಮನ ಹರಿಸಬೇಕು ಮತ್ತು ಕೆಳದಿಯ ಚರಿತ್ರೆಯನ್ನು ಯುವಜನರಿಗೆ ಪರಿಚಯಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net