

ಎನ್.ಆರ್.ಪುರ: ಕುವೆಂಪು ಅವರು ಸಾಹಿತ್ಯದಲ್ಲಿ ಎಂದಿಗೂ ಯಾವುದೇ ಧರ್ಮ ಹಾಗೂ ಜಾತಿಯನ್ನು ನಿಂದಿಸಿಲ್ಲ. ದೇವರನ್ನು ನಂಬಿ. ಆದರೆ ದೈವವನ್ನು ನಂಬಬೇಡಿ ಎಂದು ತಿಳಿಸಿದ್ದಾರೆ. ಜತೆಗೆ ಶ್ರೀರಾಮನಿಗೆ ಇರುವಷ್ಟೇ ಗೌರವ ಸೀತೆಗೂ ಇದೆ ಎಂದು ಬರಹದಲ್ಲಿ ಸಾಬೀತುಪಡಿಸಿದ್ದಾರೆ ಎಂದು ಮೈಸೂರು ಕಾಲೇಜಿನ ಉಪನ್ಯಾಸಕ ಡಾ. ಅಬ್ದುಲ್‌ವಹಾಬ್ ಹೇಳಿದರು.
ತಾಲೂಕು ಕಸಾಪದಿಂದ ಎಚ್.ಆರ್.ಕೃಷ್ಣಮೂರ್ತಿ ಅವರ ಮನೆಯಂಗಳದಲ್ಲಿ ನಡೆದ ವಿ.ಎಸ್.ನಾಗೇಶ್ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕುವೆಂಪು ಸಾಹಿತ್ಯ ಮತ್ತು ವೈಚಾರಿಕತೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಪ್ರತಿಯೊಬ್ಬರಿಗೂ ಬದುಕುವ ಸ್ವಾತಂತ್ರೃ ಹಕ್ಕು ಇರುತ್ತದೆ. ಜೀವನದಲ್ಲಿ ನಂಬಿಕೆ ಇಡಬೇಕು. ಮೂಢನಂಬಿಕೆ ಬಿಡಬೇಕು ಎಂದು ಸಾಹಿತ್ಯದಲ್ಲಿ ಪ್ರತಿಪಾದಿಸಿದ್ದಾರೆ ಎಂದರು.
ಕುವೆಂಪು ಅವರ ಅನೇಕ ಸಾಹಿತ್ಯ ಲೇಖನಗಳಲ್ಲಿ ಬರಹಗಳನ್ನು ತಿರುಚಿ ಬೇರೆ ಆಯಾಮಗಳನ್ನು ನೀಡಿದ್ದಾರೆ. ನಿಜವಾಗಿಯೂ ಸಾಹಿತ್ಯದಲ್ಲಿ ಮೌಲ್ಯ ಮತ್ತು ಮೌಢ್ಯ ಎಂಬ ಎರಡು ವಿಷಯಗಳನ್ನು ಪ್ರತಿಪಾದಿಸಿದ್ದಾರೆ. ಪ್ರತಿಯೊಬ್ಬರಿಗೂ ಸಮಾನ ಮತ್ತು ಸಮಾನತೆ ಬಗ್ಗೆ ತಿಳಿಸಿದ್ದಾರೆ. ಸರ್ವರನ್ನೂ ಸಮಾನವಾಗಿ ಕಂಡು ಸಾಹಿತ್ಯ ಬರೆದಿದ್ದಾರೆ ಎಂದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಚ್.ಎಸ್.ಪೂರ್ಣೇಶ್ ಮಾತನಾಡಿ, ಹಿರಿಯರ ಹೆಸರಿನಲ್ಲಿ ಸರ್ಕಾರದಲ್ಲಿ ದತ್ತಿ ಹಣ ಇಟ್ಟು ಆ ಹಣದ ಬಡ್ಡಿಯಲ್ಲಿ ದತ್ತಿ ಉಪನ್ಯಾಸವನ್ನು ವರ್ಷಕ್ಕೊಮ್ಮೆ ಮಾಡುವುದರ ಮೂಲಕ ಅವರನ್ನು ಸ್ಮರಿಸುವುದು ದತ್ತಿ ಉಪನ್ಯಾಸದ ಉದ್ದೇಶ. ದತ್ತಿ ಉಪನ್ಯಾಸಕ್ಕೆ ದತ್ತಿದಾನಿಗಳು ಸಹಕಾರ, ಪ್ರೋತ್ಸಾಹ ನೀಡುತ್ತಿರುವುದು ಸಂತೋಷದಾಯಕ ಎಂದು ತಿಳಿಸಿದರು.
ದತ್ತಿದಾನಿಗಳಾದ ವಿ.ಸ್.ಕೃಷ್ಣ್ಣ ಭಟ್, ಕೃಷ್ಣಮೂರ್ತಿ, ಡಾ. ಅಬ್ದುಲ್‌ವಹಾಬ್ ಅವರನ್ನು ಸನ್ಮಾನಿಸಲಾಯಿತು.
ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಾ ನಂಜುಂಡಸ್ವಾಮಿ, ಪ್ರೇಮಾ ಶ್ರೀನಿವಾಸ್, ಬಿ.ನಂಜುಂಡಪ್ಪ , ನಾಗರಾಜ್ ಅಪ್ಪಾಜಿ, ನಂದಿನಿ ಆಲಂದೂರು, ಭವಾನಿ, ಭಾನುಮತಿ, ಎಚ್.ಆರ್.ದಿನೇಶ್, ಪ್ರಭಾಕರ್, ವಿದ್ಯಾನಂದ್, ದಕ್ಷಿಣಾಮೂರ್ತಿ, ವಿದ್ಯಾ ನಾಯಕ್, ತಾರೇಶ್, ಪವಿತ್ರಾ ತಾರೇಶ್ , ದೇವರಾಜ್, ಮಂಜಪ್ಪ ಇದ್ದರು.