

ಮೈಸೂರು: ರಾಷ್ಟ್ರಕವಿ ಕುವೆಂಪು ಅವರ ತತ್ವಾದರ್ಶಗಳು ಈಗಿನ ಸಮಾಜಕ್ಕೆ ಅಗತ್ಯವಾಗಿವೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ ಹೇಳಿದರು.
ಕುವೆಂಪು ಜನ್ಮದಿನದ ಪ್ರಯುಕ್ತ ಕರ್ನಾಟಕ ರಾಜ್ಯ ಮುಕ್ತ ವಿವಿ ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಮುಕ್ತಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕುವೆಂಪು ಸಾಹಿತ್ಯ- ತೌಲನಿಕ ವಿವೇಚನೆ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಕುವೆಂಪು ಅವರ ಸಾಹಿತ್ಯದಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಜತೆಗೆ ಮಾನವೀಯತೆಯೂ ಇದೆ. ಇದನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ಶೈಕ್ಷಣಿಕ ಪ್ರಗತಿ ಮೂಲಕ ವಿವಿಧ ಕ್ಷೇತ್ರ ಅಭಿವೃದ್ಧಿ ಸಾಧ್ಯ. ಇದಕ್ಕೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕವಾಗಿದೆ. ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಕೌಶಲ ಸಹ ಕಲಿಸಲಿದೆ. ಹೊಸ ತಲೆಮಾರಿನ ಮೌಲ್ಯಾಧರಿತ ಶಿಕ್ಷಣ ಒದಗಿಸಲಿದೆ ಎಂದು ಹೇಳಿದರು.
ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ, ಡೀನ್‌ಗಳಾದ ಡಾ.ಅಶೋಕ್ ಕಾಂಬ್ಲೆ, ಪ್ರೊ.ಎಂ. ರಾಮನಾಥಂ ನಾಯ್ಡು, ಕುವೆಂಪು ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಂಯೋಜಕ ಡಾ.ಎನ್.ಆರ್. ಚಂದ್ರೇಗೌಡ ಇದ್ದರು.