ಕುವೆಂಪು ಜಯಂತಿ ಆಚರಣೆ

07Rajesh7
Published on

ಚಾಮರಾಜನಗರ: ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಅವರು ರಚಿಸದ ಸಾಹಿತ್ಯವಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ ಇಲಾಖೆ) ಉಪ ನಿರ್ದೇಶಕ ಮಂಜುನಾಥ ಪ್ರಸನ್ನ ಬಣ್ಣಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕುವೆಂಪು ಜಯಂತಿಯಲ್ಲಿ ಮುಖ್ಯಭಾಷಣ ಮಾಡಿದರು. ಕುವೆಂಪು ಬರಹ ವೈಚಾರಿಕತೆಯಿಂದ ಕೂಡಿತ್ತು. ಶ್ರೀರಾಮಾಯಣ ದರ್ಶನಂ ಕೃತಿಯಲ್ಲಿ ಸ್ತ್ರೀ ಸಂವೇದನೆ ಅಡಗಿದೆ. ಕನ್ನಡವನ್ನು ವಿಶ್ವಮಾನ್ಯ ಮಾಡಿದ ಕವಿಗಳಲ್ಲಿ ಕುವೆಂಪು ಅಗ್ರಗಣ್ಯರು. ಕನ್ನಡದ ವಿಚಾರದಲ್ಲಿ ಅಪಾರ ಭಕ್ತಿ ಹೊಂದಿದ್ದರು ಎಂದರು.

ರೇಷ್ಮೆ, ಪಶುಸಂಗೋಪನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ಸಾಹಿತ್ಯದ ಮೂಲಕ ಕುವೆಂಪು ವಿಶ್ವ ಮಾನವರಾಗಬೇಕೆಂಬ ಸಂದೇಶ ನೀಡಿದರು. ಅವರ ಜಯಂತಿ ಆಚರಣೆ ಮೂಲಕ ಸ್ಮರಣೆ ಮಾಡುವುದು, ಆದರ್ಶದಿಂದ ಬದುಕುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಎಂಎಸ್‌ಐಎಲ್ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಅತ್ಯಂತ ಶ್ರೇಷ್ಠ ಕವಿ ಎಂದರೆ ಕುವೆಂಪು. ಕನ್ನಡಿಗರೆಲ್ಲರಿಗೂ ಗೊತ್ತಿರುವ ಕವಿ ಕುವೆಂಪು, ಸಭೆ, ಸಮಾರಂಭಗಳಲ್ಲಿ ನಾಡಗೀತೆ, ರೈತಗೀತೆ ಹಾಡುವಾಗ ಕುವೆಂಪು ಅವರನ್ನು ಸ್ಮರಣೆ ಮಾಡುತ್ತೇವೆ ಎಂದು ತಿಳಿಸಿದರು.

ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ (ಮುನ್ನ), ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಜಿಪಂ ಸಿಇಒ ಮೋನಾರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಚಾಮರಾಜನಗರ ವೃತ್ತದ ಸಿಸಿಎಫ್ ಹೀರಾಲಾಲ್, ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಡಾ.ಸಂತೋಷ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಉದಯ್ ಕುಮಾರ್, ಕನ್ನಡ ಪರ ಮತ್ತು ರೈತ ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net