ಕುವೆಂಪು ಅವರ ವಿಶ್ವಮಾನವ ತತ್ವ ಎಲ್ಲರಿಗೂ ಆದರ್ಶ

24spt1
Published on

ಸೋಮವಾರಪೇಟೆ: ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ದೃಷ್ಟಿಕೋನವು ಸಾಮಾಜಿಕ, ಸಮಾನತೆ ಮತ್ತು ಮಾನವೀಯತೆಗಾಗಿ ನಿಂತಿದೆ ಎಂದು ಶಾಸಕ ಡಾ.ಮಂತರ್‌ಗೌಡ ಅಭಿಪ್ರಾಯಪಟ್ಟರು.

ರಾಷ್ಟ್ರಕವಿ ಕುವೆಂಪು ಪುತ್ಥಳಿ ನಿರ್ಮಾಣ ಸಮಿತಿ, ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿ ಮತ್ತು ಸೋಮವಾರಪೇಟೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾಹಿತ್ಯ ಭವನದ ಎದುರು ಮೂರು ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಕುವೆಂಪು ಪುತ್ಥಳಿಯನ್ನು ಶುಕ್ರವಾರ ಅನಾವರಣಗೊಳಿಸಿ ಮಾತನಾಡಿದರು.

ಕುವೆಂಪು ಅವರ ವಿಶ್ವಮಾನವ ತತ್ವವನ್ನು ನೀಡಿದಾಗ ಮಾನವೀಯ ಮೌಲ್ಯಗಳು, ಧರ್ಮಾತೀತತೆ ಮತ್ತು ವಿಶ್ವಸೌಹಾರ್ದದ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಅವರ ಸಂದೇಶ ಎಂದೆಂದಿಗೂ ನಮಗೆಲ್ಲರಿಗೂ ಆದರ್ಶವಾಗಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ಅವರ ಕೊಡುಗೆ ಅಪಾರವಾಗಿದೆ. ಕನ್ನಡ ಮಣ್ಣಿನಲ್ಲಿ ಹುಟ್ಟಿದ ಎಲ್ಲರೂ ಮಾತೃಭಾಷೆ ಕನ್ನಡವನ್ನು ಹೃದಯದಲ್ಲಿಟ್ಟುಕೊಂಡು ಬೆಳೆಸಬೇಕು. ಕನ್ನಡವನ್ನು ಮಾತನಾಡುವ ಮೂಲಕ ಭಾಷೆಯನ್ನು ಬೆಳೆಸಬೇಕು. ಕನ್ನಡ ಸಾಹಿತ್ಯ ಪರಿಷತ್‌ನಿಂದ ಕನ್ನಡಪರ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಭವನದ ಮೇಲಂತಸ್ತು ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 15 ಲಕ್ಷ ರೂ.ಗಳ ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಿದರು. ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮದ ಅಂಗವಾಗಿ ಶತಮಾನೋತ್ಸವ ಭವನದ ನಿರ್ಮಾಣದ ಕಾಮಗಾರಿ ಅನೇಕ ಕಾರಣಗಳಿಂದ ಸ್ಥಗಿತಗೊಂಡಿದ್ದು, ಕಾಮಗಾರಿಯನ್ನು ಮುಂದಿನ ಡಿಸೆಂಬರ್‌ನಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಮಾಜಿ ಸಚಿವ ಬಿ.ಎ.ಜೀವಿಜಯ ಮಾತನಾಡಿ, ಶ್ರೀರಾಮಾಯಣ ದರ್ಶನಂ ಕುವೆಂಪು ಅವರನ್ನು ರಾಷ್ಟ್ರಕವಿಯನ್ನಾಗಿ ಮಾಡಿದಷ್ಟೇ ಅಲ್ಲ, ವಿಶ್ವಮಾನವ ತತ್ವದ ಪ್ರಬೋಧಕನಾಗಿ ಬೆಳಗಿಸಿದೆ ಎಂದು ಹೇಳಿದರು. ಕನ್ನಡ ಭಾಷೆಗೆ ದೊರೆತ ಮೊದಲ ಜ್ಞಾನಪೀಠ ಗೌರವ, ಕಾವ್ಯದ ಶೈಲಿ ಅಳವಾದ ತತ್ವಚಿಂತನೆ ಮತ್ತು ಭಾಷೆಯ ವೈಭವ ಕನ್ನಡ ಸಾಹಿತ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಲ್ಲಿಸಿದೆ ಎಂದು ಹೇಳಿದರು.

ಕುಪ್ಪಳ್ಳಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಖಜಾಂಚಿ ಡಿ.ಎಂ.ಮನುದೇವ್ ದೇವಾಂಗಿ ಮಾತನಾಡಿ, ಕುವೆಂಪು ಅವರು ತಮ್ಮ 20 ನೇ ವಯಸ್ಸಿನಲ್ಲಿ ಇಂಗ್ಲಿಷ್‌ನಲ್ಲಿ ಕವನಗಳನ್ನು ಬರೆಯುತ್ತಿದ್ದರು. ಆ ಸಮಯದಲ್ಲಿ ಐರಿಸ್ ಕವಿ ಮೈಸೂರಿಗೆ ಬಂದಿದ್ದಾಗ ಕುವೆಂಪು ಅವರು ಖಾದಿ ಬಟ್ಟೆ ಧರಿಸಿ ತನ್ನ ಇಂಗ್ಲಿಷ್ ಭಾಷೆಯ ಕವನ ಸಂಕಲನವನ್ನು ಕೊಟ್ಟರು. ಕವನಗಳನ್ನು ಓದಿದ ಐರಿಷ್ ಕವಿ, ರಾಷ್ಟ್ರ ಪ್ರೇಮದ ಬಟ್ಟೆ ಧರಿಸಿದ್ದೀರಿ, ಇಂಗ್ಲಿಷ್ ಮೇಲೆ ಏಕೆ ವ್ಯಾಮೋಹ. ನಿಮ್ಮ ಮಾತೃಭಾಷೆಯಲ್ಲಿ ಸಾಹಿತ್ಯ ಬರೆದು ಹೆಸರು ಗಳಿಸಿ ಎಂದು ಹೇಳಿದರು. ಐರಿಸ್ ಮಾತುಗಳಿಂದ ಪ್ರಭಾವಿತರಾದ ಕುವೆಂಪು, ಅಂದಿನಿಂದಲೇ ಕನ್ನಡದಲ್ಲಿ ಸಾಹಿತ್ಯ ಕೃಷಿ ಪ್ರಾರಂಭಿಸಿದರು ಎಂದು ಹೇಳಿದರು.

1932ನೇ ಇಸವಿಯಲ್ಲಿ ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತನ್ನೊಂದಿಗೆ ತೆರಳಲು ಸಿದ್ಧರಾಗಿರಿ ಎಂದು ತಮ್ಮ ತಂದೆಗೆ ಕುವೆಂಪು ಪತ್ರ ಬರೆದಿದ್ದರು. ಕೊಡಗಿನ ಜನರು, ಪರಿಸರ, ಕನ್ನಡ ಪ್ರೀತಿಯ ಬಗ್ಗೆ ತಂದೆಗೆ ಬರೆದ ಪತ್ರದಲ್ಲಿ ವಿವರಿಸಿದ್ದರು ಎಂದು ಮನುದೇವ್ ಹೇಳಿದರು.

ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್, ಕುವೆಂಪು ಪ್ರತಿಮೆ ನಿರ್ಮಾಣ ಸಮಿತಿ ಅಧ್ಯಕ್ಷ ಜೆ.ಸಿ.ಶೇಖರ್, ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಎ.ಆರ್.ಮುತ್ತಣ್ಣ ಕುವೆಂಪು ಅವರ ಬಗ್ಗೆ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net