

ಮೈಸೂರು: ರಾಷ್ಟ್ರಕವಿ ಕುವೆಂಪು ಅವರ ತತ್ವಾದರ್ಶ ಪಾಲಿಸುವ ಮೂಲಕ ನಾವು ಗೌರವ ಸಲ್ಲಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.
ವಿಶ್ವಮಾನವ ಮೈಸೂರು ವಿಶ್ವವಿದ್ಯಾಲಯ ನೌಕರರ ವೇದಿಕೆ ಹಾಗೂ ನವ ವಿಶ್ವಮಾನವ ಟ್ರಸ್ಟ್ ಸಹಯೋಗದಲ್ಲಿ ಮಾನಸಗಂಗೋತ್ರಿ ಮಹಾದ್ವಾರದ ಎದುರು ಶುಕ್ರವಾರ ಆಯೋಜಿಸಿದ್ದ ಕುವೆಂಪು ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುವೆಂಪು ಅವರು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆ ಮೂಲಕ ಕನ್ನಡವನ್ನು ಎತ್ತರಕ್ಕೆ ಬೆಳೆಸಿದ್ದಾರೆ. ವಿಶ್ವಮಾನವ ಸಂದೇಶವನ್ನು ಕೂಡ ನೀಡಿದ್ದಾರೆ. ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದ ಅಸ್ಮಿತೆ. ಮಾನಸಗಂಗೋತ್ರಿ ಕ್ಯಾಂಪಸ್ ಬರಲು ಅವರೇ ಕಾರಣ. ಹೀಗಾಗಿ ಯಾವತ್ತೂ ಅವರನ್ನು ಮರೆಯಲಾಗದು ಎಂದರು.
ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಡಿ.29 ರಂದು ಕುವೆಂಪು ಅವರ ಜನ್ಮದಿನವನ್ನು ಆಚರಿಸಲಾಗಲಿಲ್ಲ. ಹೀಗಾಗಿ ಜ.8ರಂದು ವಿಶ್ವವಿದ್ಯಾಲಯ ವತಿಯಿಂದ ಕುವೆಂಪು ಜನ್ಮದಿನವನ್ನು ಆಯೋಜಿಸಲಾಗಿದೆ ಎಂದರು.
ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ, ಹಣಕಾಸು ಅಧಿಕಾರಿ ಕೆ.ಎಸ್. ರೇಖಾ, ಸಿಂಡಿಕೇಟ್ ಸದಸ್ಯರಾದ ಪ್ರೊ.ಶಬ್ಬೀರ್ ಮುಸಾಫ, ಕೆ. ಗೋಕುಲ್ ಗೋವರ್ಧನ್, ಮಹದೇಶ್, ಡಾ.ನಟರಾಜ್ ಶಿವಣ್ಣ, ಡಾ.ಸಿ. ಬಸವರಾಜು ಜಟ್ಟಿಹುಂಡಿ, ಡಾ.ಜೆ. ಶಿಲ್ಪಾ, ಕ್ಯಾತನಹಳ್ಳಿ ಸಿ. ನಾಗರಾಜು, ತೋಟಗಾರಿಕೆ ವಿಭಾಗದ ಸಹಾಯಕ ನಿರ್ದೇಶಕ ಎಸ್.ಕೆ. ಮುಜಾವರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ವೇದಿಕೆ ಅಧ್ಯಕ್ಷ ಆರ್.ವಾಸುದೇವ, ಭಾಸ್ಕರ್, ವಿನೋದ್, ಮುಖಂಡರಾದ ಬೀರೇಗೌಡ, ಕೆ.ಜಿ. ಗೌಡ, ಮೀನಾ ಇನ್ನಿತರರಿದ್ದರು.