ಕುಲಾಂತರಿ ಆಹಾರಕ್ಕೆ ವಿರೋಧ: ಸೆ.29ರಂದು ತುಮಕೂರಿನಲ್ಲಿ ‘ದೊಡ್ಡಹೊಸೂರು ಸತ್ಯಾಗ್ರಹ’

Agri
Published on

ಮೈಸೂರು: ಕುಲಾಂತರಿ ಆಹಾರ ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ಕೃಷಿ ಕ್ಷೇತ್ರದಿಂದ ಬಹಿಷ್ಕರಿಸಬೇಕೆಂದು ಸರ್ಕಾರವನ್ನು ಆಗ್ರಹಿಸುವ ಸಲುವಾಗಿ ‘ದೊಡ್ಡಹೊಸೂರು ಸತ್ಯಾಗ್ರಹ’ ಕಾರ್ಯಕ್ರಮವನ್ನು ಸೆ.29ರಿಂದ ನಾಲ್ಕು ದಿನಗಳ ಕಾಲ ತುಮಕೂರಿನ ದೊಡ್ಡಹೊಸೂರು ಗ್ರಾಮದ ಗಾಂಧೀಜಿ ಸಹಜ ಬೇಸಾಯ ಆಶ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ.


ಕುಲಾಂತರಿ ಆಹಾರ ವಿರೋಧಿ ಒಕ್ಕೂಟದ ವತಿಯಿಂದ ಇದು ನಡೆಯಲಿದೆ. ಪ್ರಗತಿಪರ ಸಂಘಟನೆಗಳು, ರೈತ ಸಂಘಟನೆಗಳು, ಸರ್ಕಾರೇತರ ಸಂಸ್ಥೆಗಳು ಪಾಲ್ಗೊಳ್ಳಲಿವೆ ಎಂದು ರಾಜ್ಯ ರೈತ ಸಂಘದ ಪದಾಧಿಕಾರಿ ಹೊಸಕೋಟೆ ಬಸವರಾಜು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಅಂದಿನ ಈಸ್ಟ್ ಇಂಡಿಯಾ ಕಂಪನಿಯಂತೆ ಈಗ ಬಹು ರಾಷ್ಟ್ರೀಯ ಕಂಪನಿಗಳು ಬಂದಿವೆ. ಹೀಗೇ ಮುಂದುವರಿದರೆ ನಮ್ಮ ಪಾರಂಪರಿಕ ಕೃಷಿ ಜ್ಞಾನ, ನಮ್ಮ ದನ, ಎಮ್ಮೆ, ಆಡು, ಕುರಿ, ಕೋಳಿ, ಅನ್ನ, ಕಾಳುಕಡ್ಡಿ, ಕೂಲಿ ಕಾರ್ಮಿಕರು, ಅಂಗಡಿ-ಮುಂಗಟ್ಟುಗಳು ಮಾಯವಾಗುತ್ತವೆ. ಅವರ ಕೃತಕ ಸರಕು, ವಿಷಮಿತ್ರಿತ ಆಹಾರ ಮೊದಲಾದವು ಮನೆ ಮನೆಗೂ ಬಂದು ನಮ್ಮ ಗ್ರಾಮ, ಸಮಾಜವನ್ನು ಹಾಳು ಮಾಡಲಿವೆ. ಆದ್ದರಿಂದ ಅರಿವು ಮೂಡಿಸಲು ಈ ಹೋರಾಟವನ್ನು ರೂಪಿಸಲಾಗಿದೆ ಎಂದು ತಿಳಿಸಿದರು.


ಕುಲಾಂತರಿ ಕಾಯ್ದೆ ತಿರಸ್ಕರಿಸಬೇಕು, ಸಹಜ ಬೇಸಾಯವನ್ನು ಪಂಚಾಯಿತಿಗಳ ಮೂಲಕ ಸ್ಥಾಪಿಸಬೇಕು, ರಾಜ್ಯ ಸರ್ಕಾರವು ರಾಜ್ಯವನ್ನು ಕುಲಾಂತರಿ ಮುಕ್ತ ರಾಜ್ಯ ಎಂದು ಘೋಷಿಸಬೇಕು, ಕೇಂದ್ರ ಸರ್ಕಾರವು ಕುಲಾಂತರಿಗೆ ಸಂಬಂಧಪಟ್ಟ ಸಂಶೋಧನೆ ಹಾಗೂ ಅದಕ್ಕೆ ಪೂರೈಸುವ ಹಣಕಾಸು ನಿಲ್ಲಿಸಬೇಕು, ಕುಲಾಂತರಿ ಆಹಾರದ ಸಲುವಾಗಿ ಹೊರ ರಾಷ್ಟ್ರಗಳಿಂದ ಹಣ ಬರುವುದಕ್ಕೆ ನಿರ್ಬಂಧ ಹೇರಬೇಕು, ದೇಶದಲ್ಲಿ ಕಳೆನಾಶಕ ಮಾರಾಟ ನಿಷೇಧಿಸಬೇಕು, ರಾಜ್ಯ ಸರ್ಕಾರವು ಸಹಜ ಬೇಸಾಯಕ್ಕೆ ಶೇ.75ರಷ್ಟು ಅಭಿವೃದ್ಧಿಯ ಹಣವನ್ನು ಪಂಚಾಯಿತಿಗಳ ಮೂಲಕ ನೀಡಬೇಕು. ಇದು ದೊಡ್ಡಹೊಸೂರು ಸತ್ಯಾಗ್ರಹದ ಬೇಡಿಕೆಗಳಾಗಿವೆ. ಇದನ್ನು ಈಡೇರಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.


ಮುಖಂಡರಾದ ಡಾ.ಎಚ್.ಮಂಜುನಾಥ್, ಬಿ.ಕರುಣಾಕರನ್, ಚಿಕ್ಕಣ್ಣ, ಶಾಂತಕೃಷ್ಣ, ಗಿರೀಶ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net