ಕುಲಕಸುಬುದಾರರಿಗೆ ಪರಿಹಾರಧನ ನೀಡಿ

14 bgp Madivala
Published on

ಬಾಗೇಪಲ್ಲಿ: ಕುಲಕಸುಬು ನಡೆಸುವ ಪ್ರತಿ ಕುಟುಂಬಕ್ಕೂ ರಾಜ್ಯ ಸರ್ಕಾರ ಪರಿಹಾರಧನ ನೀಡಬೇಕು ಎಂದು ರಾಜ್ಯ ಸಹಕಾರ ಮಹಾ ಮಂಡಳ ಉಪಾಧ್ಯಕ್ಷ ಎಚ್.ವಿ.ನಾಗರಾಜ್ ಒತ್ತಾಯಿಸಿದ್ದಾರೆ.

ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವ ಕುರಿತು ಪಟ್ಟಣದ ರಾಮಕೃಷ್ಣ ಕಲ್ಯಾಣ ಮಂಟಪದಲ್ಲಿ ತಾಲೂಕು ಮಡಿವಾಳ ಮಾಚಿದೇವರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಮಡಿವಾಳ ಸಮುದಾಯದವರಿಗೆ ರಾಜ್ಯ ಸರ್ಕಾರ 5 ಸಾವಿರ ರೂ. ಪರಿಹಾರ ನೀಡುತ್ತಿದೆ. ಆದರೆ, ರಾಜ್ಯಾದ್ಯಂತ 2 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಕುಲಕಸುಬು ನಂಬಿಕೊಂಡು ಜೀವನ ಸಾಗಿಸುತ್ತಿವೆ, ಆದರೆ ಸರ್ಕಾರ ಕೇವಲ 60 ಸಾವಿರ ಕುಟುಂಬಗಳನ್ನು ಮಾತ್ರ ಗುರುತಿಸಿದೆ. ಆದ್ದರಿಂದ ಕುಲಕಸುಬು ನಡೆಸುತ್ತಿರುವ ಎಲ್ಲ ಕುಟುಂಬಗಳಿಗೂ ಪರಿಹಾರಧನ ನೀಡಬೇಕು ಎಂದು ಆಗ್ರಹಿಸಿದರು.

ಪರಿಹಾರಧನಕ್ಕಾಗಿ ಅರ್ಜಿ ಸಲ್ಲಿಸಲು ಜೂ.30 ಕೊನೇ ದಿನವಾಗಿದೆ, ಆದರೆ ಅಧಿಕಾರಿಗಳು ಕರೊನಾ ನಿಯಂತ್ರಣ, ಇತರ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು ಕಚೇರಿಗಳಲ್ಲಿ ಸಿಗುತ್ತಿಲ್ಲ. ಅರ್ಜಿಯೊಂದಿಗೆ ಉದ್ಯೋಗ ದೃಢೀಕರಣ ಪತ್ರ ಪಡೆಯುವುದು ವಿಳಂಬವಾಗುತ್ತಿದೆ, ಅರ್ಜಿ ಸಲ್ಲಿಸುವ ಅವಧಿ ವಿಸ್ತರಿಸುವಂತೆ ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಸುರೇಶ್ ಮನವಿ ಮಾಡಿದರು.

ಎಪಿಎಂಸಿ ನಿರ್ದೇಶಕ ಜಿ.ಎನ್.ರಾಮಚಂದ್ರಪ್ಪ, ಸಂಘದ ತಾಲೂಕು ಅಧ್ಯಕ್ಷ ಪಿ.ಎನ್.ಶಿವಣ್ಣ, ಗೌರವಾಧ್ಯಕ್ಷ ರಾಮಕೃಷ್ಣಪ್ಪ, ಉಪಾಧ್ಯಕ್ಷರಾದ ಬಿಳ್ಳೂರು ರಾಮು, ಮೂರ್ತಿ, ಪ್ರಧಾನ ಕಾರ್ಯದರ್ಶಿ ಗಂಗಾಧರ, ಎಲ್.ರಮಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net