ಕುಲಕಸುಬು ನಂಬಿದರೆ ಬದುಕು ಕಷ್ಟ; ಕಲ್ಲು ಹೊಡೆಯುವ ಕೆಲಸಕ್ಕೆ ಯಂತ್ರಗಳೇ ಪ್ರತಿಸ್ಪರ್ಧಿ ; ಭೋವಿ ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಬೇಸರ

Bhovi Samavesha (6)
Published on

ತುಮಕೂರು: ಭೋವಿ ಸಮುದಾಯದ ಕುಲಕಸುಬು ‘ಕಲ್ಲು ಹೊಡೆಯುವ ಕೆಲಸಕ್ಕೆ’ ತಂತ್ರಜ್ಞಾನ, ಯಂತ್ರಗಳೇ ಪ್ರತಿಸ್ಪರ್ಧಿಯಾಗಿವೆ. ಸಾವಿರ ಜನ ಮಾಡುವ ಕೆಲಸವನ್ನು ಯಂತ್ರಗಳು ಗಂಟೆಯಲ್ಲಿ ಮಾಡುತ್ತವೆ, ಭೋವಿ ಸಮಾಜ ಕುಲಕಸುಬು ನಂಬಿಕೊಂಡರೆ ಬದುಕು ಕಷ್ಟವಾಗುತ್ತದೆ ಎಂದು ಭೋವಿಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

ನಗರದ ಅಮಾನಿಕೆರೆ ಗಾಜಿನ ಮನೆಯಲ್ಲಿ ಭಾನುವಾರ ಜಿಲ್ಲಾ ಭೋವಿ ಸಂಘದ ಆಯೋಜಿಸಿದ್ದ ‘ಸಿದ್ದರಾಮೇಶ್ವರರ ಜಯಂತ್ಯುತ್ಸವ, ಜಿಲ್ಲಾ ಭೋವಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕಾಲಬದಲಾದಂತೆ ವೃತ್ತಿ ಬದಲಾಯಿಸಿಕೊಳ್ಳುವ ಅಗತ್ಯವಿದೆ, ಸಮಾಜದ ಎಲ್ಲರೂ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು, ಎಲ್ಲರೂ ಜ್ಞಾನವಂತರಾದಾಗ ಸಮುದಾಯದ ಅಭಿವೃದ್ಧಿ ಸಾಧ್ಯ. ಶಿಕ್ಷಣ ಪಡೆದವರು ಉದ್ಯೋಗ ಹುಡುಕುವ ಪ್ರಯತ್ನ ಮಾಡದೆ, ತಾವೇ ಉದ್ಯೋಗ ಸೃಷ್ಟಿ ಮಾಡಿ, ನಾಲ್ಕಾರು ಜನರಿಗೆ ಉದ್ಯೋಗ ನೀಡಲು ತಮ್ಮ ಕೌಶಲ, ಪ್ರತಿಭೆ ಬಳಸಬೇಕು ಎಂದರು.

ಅರಣ್ಯ ಸಚಿವ ಅರವಿಂದ ಲಿಂಬಾವಣಿ ಮಾತನಾಡಿ, ಭೋವಿ ಸಮಜದವರು ಕಲ್ಲು ಹೊಡೆಯಲು ಅವಕಾಶವಿದೆ. ಆದರೆ, ಬಂಡೆ ಸ್ಫೋಟಿಸಲು ಅವಕಾಶವಿಲ್ಲ ಹಾಗೂ ಸಂಘಗಳನ್ನು ರಚನೆ ಮಾಡಿಕೊಂಡು ಸಂಘಗಳ ಮೂಲಕ ಕಲ್ಲು ಹೊಡೆಯುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕೆರೆ-ಕಟ್ಟೆ ಕಟ್ಟಿ ಸಮಾಜಕ್ಕೆ ನೆರವಾದ ಸಿದ್ದರಾಮೇಶ್ವರರು, ಗಂಗೆಯನ್ನು ಕೈಲಾಸದಿಂದ ಭೂಮಿಗೆ ತಂದ ಭಗೀರಥ ನಮ್ಮ ಸಮುದಾಯಕ್ಕೆ ಸೇರಿದವರು. ಅಂತಹ ಪರಂಪರೆ ಹೊಂದಿರುವ ನಾವು ಸಂಘಟಿತರಾಗಿ ಸಮಾಜಮುಖಿ ಕೆಲಸ ಮಾಡಬೇಕು, ಸಮಾಜ ಒಟ್ಟಾದರೆ ಸಾಧಿಸಲು ಸಾಧ್ಯ. ಒಗ್ಗಟ್ಟು ಇಲ್ಲವಾದರೆ ಇತರ ಸಮಾಜ ಹಾಗೂ ಸರ್ಕಾರಗಳು ಕಡೆಗಣಿಸುವ ಅಪಾಯವಿದೆ ಎಂದರು.

ಸಂಘಟನೆ ಮೂಲಕ ಸಮಾಜದ ಶಕ್ತಿ ಹೆಚ್ಚಿಸುವ ಪ್ರಯತ್ನ ಆಗಬೇಕು, ಜತೆಗೆ ಶಿಕ್ಷಣಕ್ಕೆ ಒತ್ತು ನೀಡಿ ಸಮಾಜದ ಎಲ್ಲರೂ ಜ್ಞಾನವಂತರನ್ನಾಗಿ ನವ ಉದ್ಯಮಗಳನ್ನು ನಡೆಸುವಂತಾಗಬೇಕು, ಹಿಂದೆ ನಮ್ಮ ಸಮಾಜದಲ್ಲಿ ಒಗ್ಗಟ್ಟಿರಲಿಲ್ಲ ಆದರೆ ಈಗ ಜಾಗೃತಿ ಮೂಡುತ್ತಿದೆ, ಇಂದಿನ ಯುವ ಜನ ಶಿಕ್ಷಣ, ಸಂಘಟನೆಗೆ ಒತ್ತು ನೀಡುವ ವಿಚಾರದಲ್ಲಿ ಕಾರ್ಯೋನ್ಮುಖರಾಗುತ್ತಿದ್ದಾರೆ ಎಂದರು. ಗ್ರಾಪಂ ಚುನಾವಣೆಯಲ್ಲಿ ಆಯ್ಕೆಯಾದ ಭೋವಿ ಜನಾಂಗದ ಸದಸ್ಯರನ್ನು ಸನ್ಮಾನಿಸಲಾಯಿತು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ, ರಾಷ್ಟ್ರೀಯ ಭೋವಿ ಪರಿಷತ್ ಅಧ್ಯಕ್ಷ ಡಾ.ಎಚ್.ರವಿ ಮಾಕಳಿ, ರಾಜ್ಯಾಧ್ಯಕ್ಷ ಆನಂದಪ್ಪ, ಜಿಲ್ಲಾಧ್ಯಕ್ಷ ಓಂಕಾರ್, ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಉಮೇಶ್, ಮುಖಂಡರಾದ ಮುನಿರಾಜು, ಪೆದ್ದರಾಜು ಮತ್ತಿತರರು ಇದ್ದರು. ನಗರದ ಬಿಜಿಎಸ್ ವೃತ್ತದಿಂದ ಗಾಜಿನಮನೆಯವರೆಗೂ ಸಾಗಿಬಂದ ಸಿದ್ದರಾಮೇಶ್ವರರ ಭಾವಚಿತ್ರದ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗಿಯಾದರು. ಜನಪದ ಕಲಾತಂಡಗಳು ಬೃಹತ್ ಮೆರವಣಿಗೆಗೆ ಕಳೆ ತಂದಿದ್ದವು.

ಭೋವಿ ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಇದೆ, ಒಗ್ಗಟ್ಟು ಇಲ್ಲದಿದ್ದರೆ ಸರ್ಕಾರ ನಮ್ಮನ್ನು ಗುರುತಿಸುವುದಿಲ್ಲ, ರಾಜಕೀಯ ಸ್ಥಾನಮಾನ, ಸವಲತ್ತುಗಳು ಸುಲಭವಾಗಿ ಸಿಗುವುದಿಲ್ಲ, ಪಕ್ಷಾತೀತವಾಗಿ ಸಂಘಟಿತರಾಗಬೇಕು. ವೆಂಕಟರಮಣಪ್ಪ ಶಾಸಕ ಕಲ್ಲು ಹೊಡೆಯುವ ಕುಲಕಸುಬು ನಂಬಿ ಬದುಕುತ್ತಿರುವ ಭೋವಿ ಸಮಾಜದ ಕಲ್ಲು ಹೊಡೆಯುವ ಕೆಲಸಕ್ಕೆ ತೊಂದರೆ ಮಾಡಬಾರದು ಎಂದು ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪನವರೇ ಸೂಚನೆ ನೀಡಿದ್ದರೂ ಕೆಲವು ಕಡೆ ತೊಂದರೆ ನೀಡುತ್ತಿರುವ ದೂರುಗಳಿವೆ, ಶೀಘ್ರದಲ್ಲಿಯೇ ಅಧಿಕಾರಿಗಳ ಸಭೆ ಕರೆದು ಮತ್ತೊಮ್ಮೆ ಸೂಚನೆ ನೀಡುತ್ತೇವೆ. ಅರವಿಂದ ಲಿಂಬಾವಳಿ, ಅರಣ್ಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net