

ಚಿತ್ರದುರ್ಗ: ಬಹುರಾಷ್ಟ್ರೀಯ ಕಂಪನಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವ ರಾಜ್ಯ ಸರ್ಕಾರ, ಕುಲ ಕಸುಬುಗಳನ್ನು ಕಡೆಗಣಿಸಿದೆ. ಇದನ್ನು ಅವಲಂಬಿಸಿರುವ ಸಮುದಾಯಗಳು ವಿನಾಶದ ಹಂಚು ತಲುಪುತ್ತಿವೆ. ಇನ್ನಾದರೂ ಎಚ್ಚೆತ್ತುಕೊಂಡು ಪ್ರೋತ್ಸಾಹಿಸಬೇಕು ಎಂದು ಅತಿ ಹಿಂದುಳಿದ ಮಠಾಧೀಶರ ಮಹಾಸಭಾದ ರಾಜ್ಯಾಧ್ಯಕ್ಷ ಶ್ರೀ ಪ್ರಣವಾನಂದ ಸ್ವಾಮೀಜಿ ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ಮಹಾಸಭಾ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಕುಂಬಾರಿಕೆ, ಕಮ್ಮಾರಿಕೆ, ಚಮ್ಮಾರಿಕೆ, ಅಕ್ಕಸಾಲಿಗ, ಸೇಂದಿ ಇಳಿಸುವುದು ಸೇರಿ ಇನ್ನಿತರ ಕುಲಕಸುಬುಗಳು ನಶಿಸಿ ಹೋಗುತ್ತಿವೆ. ಅವುಗಳ ಉಳಿವಿಗೆ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಕಾಂತರಾಜು ಆಯೋಗದ ವರದಿ ಸರ್ಕಾರ ಸ್ವೀಕರಿಸಿ, ಅಂಗೀಕರಿಸಿ, ಜಾರಿಗೊಳಿಸಲು ಮುಂದಾಗಬೇಕು. ಸರ್ಕಾರ ವಿವಿಧ ನಿಗಮ ಮಂಡಳಿ ಸ್ಥಾಪಿಸಿದೆಯೇ ಹೊರತು ಅಗತ್ಯ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಹಿಂದುಳಿದ ಸಮುದಾಯಗಳು ಅಭಿವೃದ್ಧಿಯಾಗದೆ, ನಿರ್ಲಕ್ಷೃಕ್ಕೆ ಒಳಗಾಗಿವೆ. ಆದ್ದರಿಂದ ಅನುದಾನ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಪ್ರಭಾವಿ ಮಠಗಳಿಗೆ ಮಾತ್ರ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ. ನಮ್ಮಂತಹ ಮಠಗಳನ್ನು ನಿರ್ಲಕ್ಷಿಸಿದೆ ಎಂದು ಅಸಮಾಧಾನ ಹೊರಹಾಕಿದರು.
ನಾಡಿನ ಪ್ರಮುಖ ಮೂರು ಪಕ್ಷಗಳು ಚುನಾವಣೆ ವೇಳೆ ಮಾತ್ರ ಹಿಂದುಳಿದವರನ್ನು ಬಳಸಿಕೊಂಡು, ನಂತರ ದೂರು ಇಡುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು. ಹೀಗಾಗಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಈ ವೇಳೆ ಸಮುದಾಯದವರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಂಬೇಡ್ಕರ್ ನೀಡಿರುವ ಮತದಾನದ ಅಸ್ತ್ರವನ್ನು ಮಾರಿಕೊಳ್ಳದೆ, ಉತ್ತಮರ ಆಯ್ಕೆ ಮಾಡುವಂತೆ ಅಭಿಯಾನ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.
ನಮ್ಮಗಳತ್ತ ಸರ್ಕಾರ ಅಸಡ್ಡೆ: ಶೋಷಿತ ಸಮುದಾಯಗಳನ್ನು ಆಳುವ ಪಕ್ಷಗಳು ಕಡೆಗಣಿಸುತ್ತಲೇ ಬಂದಿವೆ. ಈ ಕುರಿತು ಮೊದಲು ಗ್ರಾಮೀಣ ಭಾಗದಿಂದಲೂ ಜನಜಾಗೃತಿ ಮೂಡಿಸಲಾಗುವುದು ಎಂದು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶ್ರೀ ಬಸವನಾಗಿದೇವ ಸ್ವಾಮೀಜಿ ಹೇಳಿದರು.
ಶಿಕ್ಷಣಕ್ಕೆ ಆದ್ಯತೆ ನೀಡಿ, ನಮ್ಮಲ್ಲಿನ ಲೋಪ ಸರಿಪಡಿಸಿಕೊಂಡು ಮುಖ್ಯವಾಹಿನಿಗೆ ಬರುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ಅತಿ ಹಿಂದುಳಿದ ಸಮುದಾಯಗಳ ಮುಖಂಡರ ಸಭೆಯನ್ನು ಜ.31ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದು, ಅಲ್ಲಿ ನಿರ್ಣಯ ಕೈಗೊಂಡು ಸಮಿತಿ ರಚಿಸಲಾಗುವುದು ಎಂದರು.
ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ದೊಡ್ಡೇಂದ್ರ ಶ್ರೀ, ರಾಜ್ಯ ಪ್ರಧಾನ ಕಾರ್ಯದರ್ಶಿ ಸರ್ದಾರ್ ಸೇವಾಲಾಲ್ ಶ್ರೀ, ಉಪಾಧ್ಯಕ್ಷ ಬಸವಮೂರ್ತಿ ಕುಂಬಾರ ಗುಂಡಯ್ಯ ಶ್ರೀ, ಸದಸ್ಯ ಕರುಣಾಕರ ಶ್ರೀ ಇತರರಿದ್ದರು.