ಕುರ್ಚಿಗೆ ಇಬ್ಬರು ಅಧಿಕಾರಿಗಳ ಜಟಾಪಟಿ

Published on

ಹನೂರು: ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮುಖ್ಯಾಧಿಕಾರಿ ಕುರ್ಚಿಗೆ ಇಬ್ಬರು ಅಧಿಕಾರಿಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ನೆರೆದಿದ್ದ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಈ ಬೆಳವಣಿಗೆಗೆ ಸಾಕ್ಷಿಯಾದರು.

ಪ.ಪಂ.ನಲ್ಲಿ ಈ ಹಿಂದೆ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮೂರ್ತಿ ಅವರು ಪ್ರಕರಣವೊಂದರಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಹಿನ್ನಲೆ ಜಿಲ್ಲಾಧಿಕಾರಿ ಅವರು 2023, ಡಿ.14 ರಂದು ಕಡ್ಡಾಯ ನಿವೃತ್ತಿಗೆ ಆದೇಶ ಹೊರಡಿಸಿ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದರು. ಈ ಆದೇಶದ ವಿರುದ್ಧ ಮೂರ್ತಿ ಅವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಈ ಆದೇಶವನ್ನು ರದ್ದುಗೊಳಿಸಿ ಕರ್ತವ್ಯದ ಮರು ನೇಮಕಕ್ಕೆ ಆದೇಶಿಸಿತ್ತು. ಜತೆಗೆ ಇವರಿಗೆ ಬರಬೇಕಿದ್ದ ವೇತನ ಬಾಕಿ, ಸೇವೆಯ ನಿರಂತರತೆ ಹಾಗೂ ಸಿಗಬೇಕಾದ ಎಲ್ಲಾ ಪ್ರಯೋಜನಗಳನ್ನು 4 ವಾರದೊಳಗೆ ನೀಡಲು ಆದೇಶಿಸಿದೆ.

ಈ ಹಿನ್ನೆಲೆ ಮೂರ್ತಿ ಅವರು ಕರ್ತವ್ಯಕ್ಕೆ ಅವಕಾಶ ಮಾಡಿಕೊಡುವಂತೆ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಮಂಗಳವಾರ ಕರ್ತವ್ಯಕ್ಕೆ ಹಾಜರಾಗಲು ಪಪಂ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಕಾರ್ಯನಿರ್ವಹಿಸುತ್ತಿದ್ದ ಹಾಲಿ ಮುಖ್ಯಾಧಿಕಾರಿ ಅಶೋಕ್ ಅವರಲ್ಲಿ ಈ ಬಗ್ಗೆ ಕೇಳಿಕೊಂಡರು. ಆದರೆ, ಇದಕ್ಕೊಪ್ಪದ ಅಶೋಕ್ ಜಿಲ್ಲಾಧಿಕಾರಿ ಅವರಿಂದ ಅಧಿಕೃತ ಆದೇಶ ಪತ್ರವಿಲ್ಲದೆ ಈ ರೀತಿ ಕಚೇರಿಗೆ ಆಗಮಿಸಿರುವುದು ಕಾನೂನು ಬಾಹಿರ. ಹಾಗಾಗಿ ಡಿಸಿ ಅವರಿಂದ ಆದೇಶ ಪತ್ರ ಪಡೆದು ಕಚೇರಿಗೆ ಆಗಮಿಸಿ ಎಂದು ತಿಳಿಸಿದರು. ಈ ವೇಳೆ ಇಬ್ಬರ ನಡುವೆ ಅಧಿಕಾರಕ್ಕಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ತೀವ್ರ ವಾಗ್ವಾದವೇ ನಡೆಯಿತು. ಮೂರ್ತಿ ಅವರು ಕರ್ತವ್ಯಕ್ಕಾಗಿ ಪಟ್ಟುಹಿಡಿದು ಕುಳಿತಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರು ಹಾಗೂ ಕೆಲ ಪ.ಪಂ.ಸದಸ್ಯರು. ಬಳಿಕ ಮೂರ್ತಿ ಅವರು ಜಿಲ್ಲಾಧಿಕಾರಿ ಅವರಿಂದ ಆದೇಶ ಪತ್ರ ಪಡೆಯಲು ತೆರಳಿದರು.

ದೂರಿಗೆ ಆಕ್ಷೇಪ: ಇಬ್ಬರು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ಸಂದರ್ಭದಲ್ಲೇ ನಗಾರಾಭಿವೃದ್ಧಿ ಯೋಜನಾಧಿಕಾರಿ ಸುಧಾ, ಅಶೋಕ್ ಅವರಿಗೆ ಕರೆಮಾಡಿ ಮೂರ್ತಿ ಅವರು ಕರ್ತವ್ಯಕ್ಕೆ ನೇಮಕ ಸಂಬಂಧ ಯಾವುದೇ ಆದೇಶ ಬಂದಿಲ್ಲ. ಹಾಗಾಗಿ ಈ ಸಂಬಂಧ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದರು. ಈ ಸಂದರ್ಭ ಸಾರ್ವಜನಿಕರು ಹಾಗೂ ಕೆಲ ಸದಸ್ಯರು ಅಶೋಕ್ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಒಂದೇ ಹುದ್ದೆಗಾಗಿ ಇಬ್ಬರು ಅಧಿಕಾರಿಗಳು ಕಚೇರಿಯಲ್ಲಿ ಕಿತ್ತಾಡಿಕೊಂಡಿರುವುದರ ಬಗ್ಗೆ ಪಟ್ಟಣದ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net