

ಕೊಳ್ಳೇಗಾಲ: ತಾಲೂಕಿನ ಉತ್ತಂಬಳ್ಳಿ ಗ್ರಾಮದ ಕುರುಬರ ಬಡಾವಣೆಯಲ್ಲಿ ಶ್ರೀ ಸಿದ್ದಪ್ಪಾಜಿ ದೇವಾಲಯದ ಜೀರ್ಣೋದ್ಧಾರ ಹಾಗೂ ಸಂಪ್ರೋಕ್ಷಣಾ ಪೂಜಾ ಮಹೋತ್ಸವ ಶುಕ್ರವಾರ ಸಡಗರದಿಂದ ನಡೆಯಿತು.
ಶ್ರೀ ಕ್ಷೇತ್ರ ಕುರುಬನಕಟ್ಟೆಯ ಮಠದ ಧರ್ಮಾಧಿಕಾರಿ ಬಿ.ಎಸ್.ವರುಣಲಿಂಗ ರಾಜೇಅರಸ್ ಸ್ವಾಮೀಜಿ ಸಾನ್ನಿಧ್ಯದಲ್ಲಿ ದೇವಾಲಯದ ಜೀರ್ಣೋದ್ಧಾರ ಪೂಜಾ ವಿಧಿ ವಿಧಾನಗಳು ನಡೆದವು. ಕುರುಬನ ಕಟ್ಟೆ ಮಠದಿಂದ ತರಲಾಗಿದ್ದ ಕಂಡಾಯಗಳನ್ನು ಗ್ರಾಮದ ಹೊರ ವಲಯದ ಪಂಪ್ ಹೌಸ್‌ನಲ್ಲಿ ಶುಚಿಗೊಳಿಸಿ ಹೂ-ಹೊಂಬಾಳೆಗಳಿಂದ ಅಲಂಕರಿಸಲಾಯಿತು. ನಂತರ ನೀಲಗಾರರ ಸಂಪ್ರಾದಾಯಿಕ ವಿಧಿ-ವಿಧಾನಗಳೊಡನೆ ಗ್ರಾಮದೊಳಗೆ ತರಲಾದ ಸ್ವಾಮಿ ಕಂಡಾಯಗಳನ್ನು ದೇವಾಲಯ ಪ್ರವೇಶ ಮಾಡಿಸಿ ಜೀರ್ಣೋದ್ದಾರಕ್ಕೆ ಚಾಲನೆ ನೀಡಲಾಯಿತು.
ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಕಂಡಾಯಗಳನ್ನು ಎಲ್ಲ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಯುವಕರು ವಾದ್ಯಗಳ ತಾಳಕ್ಕೆ ಕುಣಿದು ಕುಪ್ಪಳಿಸಿದರು. ಕಾಗಿನಲೆ ಮಹಾಸಂಸ್ಥಾನ ಗುರುಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಹಾಗೂ ಕುರುಬರ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಮುಖಂಡರಾದ ಮಾದೇಶ್, ಪುಟ್ಟಮಲ್ಲೇಗೌಡ, ರಾಚಯ್ಯ, ರಾಮಚಂದ್ರ, ನಂಜಯ್ಯ, ಬಸವೇಗೌಡ, ಮಹದೇವ, ನಂಜೇಗೌಡ ಇದ್ದರು.