

ಮೈಸೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಒತ್ತಾಯಿಸಿ ಡಿ.27ರಂದು ಬೆಳಗ್ಗೆ 11ಕ್ಕೆ ಬೆಳಗಾವಿಯ ಸುವರ್ಣಸೌಧದ ಬಳಿ ಪ್ರತಿಭಟನೆ ನಡೆಸಲು ಕರ್ನಾಟಕ ಪ್ರದೇಶ ಕುರುಬರ ಸಂಘ, ಎಸ್‌ಟಿ ಮೀಸಲು ಹೋರಾಟ ಸಮಿತಿ ತೀರ್ಮಾನಿಸಿದೆ.
ಮೈಸೂರಿನ ಸಿದ್ಧಾರ್ಥನಗರದ ಕನಕ ಭವನದಲ್ಲಿ ಶುಕ್ರವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು.
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ರಾಜ್ಯ ಸರ್ಕಾರದಿಂದ ಕುಲಶಾಸ್ತ್ರೀಯ ಅಧ್ಯಯನ ವರದಿಯನ್ನು ಪರಿಶಿಷ್ಟ ಮತ್ತು ಬುಡಕಟ್ಟು ಇಲಾಖೆಯ ನಿರ್ದೇಶಕರಿಂದ ಪಡೆದು, ಆ ವರದಿಯನ್ನು ಸಚಿವ ಸಂಪುಟದಲ್ಲಿಟ್ಟು ಚರ್ಚಿಸಬೇಕು. ಅಲ್ಲಿ ಅನುಮೋದನೆ ಪಡೆದುಕೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಈ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಲು ಪ್ರತಿಭಟನೆ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗೂ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ತಿಳಿಸಿದರು.
ಈಗಾಗಲೇ ಕನಕ ಗುರುಪೀಠದ ಸ್ವಾಮೀಜಿ ಪಾದಯಾತ್ರೆ ನಡೆಸಿ ಆಗ್ರಹಿಸಿದ್ದಾರೆ. ಹಲವು ಬಾರಿ ಪ್ರತಿಭಟನೆಯನ್ನೂ ಮಾಡಲಾಗಿದೆ. ಆದರೂ ರಾಜ್ಯ ಸರ್ಕಾರವು ಕುರುಬ ಸಮುದಾಯವನ್ನು ನಿರ್ಲಕ್ಷಿಸಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಲ್ಲಿ ಕುರುಬ ಸಮುದಾಯದ ನಾಯಕರು, ಮುಖಂಡರು, ಕಾರ್ಯಕರ್ತರು ಇದ್ದಾರೆ. ಆದರೆ, ಸಮುದಾಯದ ಹಿತಕಾಯುವ ವಿಚಾರದಲ್ಲಿ ಪಕ್ಷಭೇದ ಮರೆತು ಒಂದಾಗುತ್ತೇವೆ. ಈ ಪ್ರತಿಭಟನೆಯಲ್ಲಿ ಎಲ್ಲ ಪಕ್ಷಗಳಲ್ಲಿರುವ ನಮ್ಮ ಸಮುದಾಯದ ಮುಖಂಡರು, ನಾಯಕರು ಪಾಲ್ಗೊಳ್ಳಲಿದ್ದಾರೆ. ಸುಮಾರು 3 ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ ಇದೆ. ಮೈಸೂರು, ಚಾಮರಾಜನಗರ ಜಿಲ್ಲೆಗಳಿಂದ 25 ಸಾವಿರಕ್ಕೂ ಹೆಚ್ಚು ಜನರು ಬೆಳಗಾವಿಗೆ ತೆರಳಲಿದ್ದಾರೆ ಎಂದರು.
ಅಧಿವೇಶನದಲ್ಲೇ ಕುರುಬ ಸಮುದಾಯಕ್ಕೆ ನ್ಯಾಯ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಗೆ ಸಂಬಂಧಿಸಿದಂತೆ ಈಗಾಗಲೇ ಬೆಳಗಾವಿ, ಗದಗ, ವಿಜಯಪುರದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಮೈಸೂರು, ಚಾಮರಾಜನಗರ ಜಿಲ್ಲೆಗಳ ಮುಖಂಡರ ಸಭೆಯನ್ನು ಮೈಸೂರಲ್ಲಿ ನಡೆಸಲಾಗಿದೆ. ಎಲ್ಲೆಡೆ ವ್ಯಾಪಕ ಬೆಂಬಲ ದೊರೆಯುತ್ತಿದೆ ಎಂದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ಜೆ.ಗೋಪಿ, ಅಭಿಲಾಷ್, ಜಿಲ್ಲಾಧ್ಯಕ್ಷ ಶಿವಪ್ಪ ಕೋಟೆ, ತಾಲೂಕು ಅಧ್ಯಕ್ಷ ಬಸವರಾಜು, ಕೆಂಪಣ್ಣ, ಶಿವಣ್ಣ, ಕುನ್ನೇಗೌಡ, ಮಹೇಶ್, ಬಿ.ಎಂ.ಆನಂದ್, ಗಣೇಶ್, ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ಮುಖಂಡರಾದ ಹಿನಕಲ್ ಉದಯ್, ಗಂಧನಹಳ್ಳಿ ಜಿ.ಹೇಮಂತ್‌ಕುಮಾರ್, ಸೋಮಶೇಖರ್, ಮಹದೇವಸ್ವಾಮಿ, ನಂಜೇಗೌಡ, ನಾಡನಹಳ್ಳಿ ರವಿ, ಬಿಎಸ್‌ಎನ್‌ಎಲ್ ಮಾದೇಗೌಡ, ರಾಜೇಶ್ವರಿ, ಲೋಹಿತ್, ಅಭಿಷೇಕ್ ಇನ್ನಿತರರು ಪಾಲ್ಗೊಂಡಿದ್ದರು.