

ರಾಜೇಶ್ ಎಸ್.ಜಿ.ಮುಕ್ಕೇನಹಳ್ಳಿ ದೊಡ್ಡಬಳ್ಳಾಪುರ
ತಾಲೂಕಿನ ಕಾಡನೂರು ಗ್ರಾಪಂ ಗ್ರಂಥಾಲಯ ಕುರಿ ದೊಡ್ಡಿಯಂತಾಗಿದೆ. ಮಳೆ ಬಂದರೆ ಸೋರುತ್ತಿದ್ದು, ಛಾವಣಿಯ ಕಾಂಕ್ರೀಟ್ ಉದುರುವುದು ಸಾಮಾನ್ಯ ಎಂಬಂತಾಗಿದೆ.
ಗ್ರಂಥಾಲಯ ಕಟ್ಟಡದಲ್ಲಿ ಸರಿ ಇದೆ ಎಂದು ಹೇಳಲು ಯಾವುದೂ ನೆಟ್ಟಗಿಲ್ಲ. ನೀರು ಸೋರುವುದರಿಂದ ಪುಸ್ತಕಗಳು ಹಾಳಾಗುತ್ತಿವೆ. ಕಟ್ಟಡದಲ್ಲಿ ಧೂಳು ಆವರಿಸಿದ್ದು, ಕುಳಿತು ಓದಲು ಸೂಕ್ತ ವ್ಯವಸ್ಥೆ ಇಲ್ಲವಾಗಿದೆ. ಇದರಿಂದ ಗ್ರಂಥಾಲಯಕ್ಕೆ ಬರುವ ಓದುಗರಿಗೆ ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ಈ ಬಗ್ಗೆ ಪಂಚಾಯಿತಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲದಾಗಿದೆ.
ಕಟ್ಟಡದ ಅಭಿವೃದ್ಧಿಗೆ ಗ್ರಾಪಂ ನಿರ್ಲಕ್ಷ್ಯವಹಿಸಿದೆ. ಇನ್ನಾದರೂ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಗ್ರಾಪಂ ಕಾರ್ಯಾಲಯಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಮದಗೊಂಡನಹಳ್ಳಿಯ ಚೇತನ್‌ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಗ್ರಂಥಾಲಯ ಕಟ್ಟಡ ಈ ಹಿಂದೆ ಶಾಲೆ, ಪಂಚಾಯಿತಿ ಕಾರ‌್ಯಾಲಯವಾಗಿಯೂ ಬಳಕೆಯಾಗಿತ್ತು. ಕಟ್ಟಡ ಸಂಪೂರ್ಣ ಶಿಥಿಲವಾಗಿದ್ದು, ದುರಸ್ತಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಹೊಸ ಕಟ್ಟಡವನ್ನೇ ನಿರ್ಮಿಸಬೇಕಿದೆ. ಸದ್ಯಕ್ಕೆ ಗ್ರಾಪಂನಲ್ಲಿ ಅನುದಾನ ಇಲ್ಲದ ಕಾರಣ ದಾನಿಗಳ ಸಹಾಯದಿಂದ ಕಟ್ಟಡ ನಿರ್ಮಾಣಕ್ಕೆ ಗ್ರಾಪಂ ಚುನಾಯಿತ ಪ್ರತಿನಿಧಿಗಳಿಂದ ಪ್ರಯತ್ನ ಪ್ರಗತಿ ಹಂತದಲ್ಲಿದೆ. ಸೌಮ್ಯಾ, ಪಿಡಿಒ, ಕಾಡನೂರು ಗ್ರಾಪಂ