ಕುರಿ, ಮೇಕೆ ಖರೀದಿ ಭರಾಟೆ ಜೋರು, ಸೊಂಡೆಕೊಪ್ಪ ವೃತ್ತದ ಸಂತೆಯಲ್ಲಿ ದೈಹಿಕ ಅಂತರ ಮರೆತ ಜನ, ಕರೊನಾ ಮಾರ್ಗಸೂಚಿ ಉಲ್ಲಂಘನೆಗೆ ಬಿತ್ತು ದಂಡ

09 Nela Ph 01 Santhe
Published on

ನೆಲಮಂಗಲ: ರಾಜ್ಯಾದ್ಯಂತ ಕರೊನಾ 2ನೇ ಅಲೆ ಜೋರಾಗಿರುವ ಬೆನ್ನಲ್ಲೇ ಹಿಂದುಗಳ ಹೊಸ ವರ್ಷ ಯುಗಾದಿ ಹಬ್ಬ ಬಂದಿದೆ. ಹೊಸ ತೊಡಕಿನ ದಿನಕ್ಕಾಗಿ ಹಬ್ಬಕ್ಕೆ ನಾಲ್ಕು ದಿನಗಳ ಮುಂಚಿತವಾಗಿ ಜನರು ಕುರಿ, ಮೇಕೆ, ನಾಟಿ ಕೋಳಿಗಳ ಖರೀದಿಗೆ ಮುಂದಾಗಿದ್ದಾರೆ. ಖರೀದಿ ಅವಸರದಲ್ಲಿ ದೈಹಿಕ ಅಂತರ ಮರೆತು ಕರೊನಾ ಮಾರ್ಗಸೂಚಿ ಉಲ್ಲಂಸಿದ್ದಕ್ಕಾಗಿ ದಂಡವನ್ನೂ ತೆತ್ತಿದ್ದಾರೆ.

ನಗರದ ಸೋಂಡೆಕೊಪ್ಪ ವೃತ್ತದ ಅಂಬೇಡ್ಕರ್‌ನಗರ ಬಳಿಯ ಸಂತೆ ಮೈದಾನದಲ್ಲಿ ಕುರಿ, ಮೇಕೆ ವ್ಯಾಪಾರಿಗಳು ವಾರದ ಸಂತೆ ಹಾಕಿದ್ದರು. ಹಬ್ಬದ ನಿಮಿತ್ತ ಸಂತೆ ಹಾಕಿದ್ದರಿಂದ, ಜನರು ಕೂಡ ಕುರಿ, ಮೇಕೆ ಖರೀದಿಗಾಗಿ ಮುಗಿಬಿದ್ದರು.

ಕರೊನಾ ಮಾರ್ಗಸೂಚಿ ಪಾಲಿಸುವಂತೆ ಅಧಿಕಾರಿಗಳು ಹೇಳಿದರೂ ಕೇಳಲಿಲ್ಲ. ಇದೇ ಸಂದರ್ಭದಲ್ಲಿ ಸಂತೆಗೆ ಬಂದ ತಹಸೀಲ್ದಾರ್ ಕೆ. ಮಂಜುನಾಥ್, ಮಾಸ್ಕ್ ಧರಿಸದೇ ವ್ಯಾಪಾರ ಮಾಡುತ್ತಿದ್ದವರಿಗೆ, ಖರೀದಿ ಮಾಡುತ್ತಿದ್ದವರಿಗೆ, ದೈಹಿಕ ಅಂತರ ಕಾಯ್ದುಕೊಳ್ಳಲು ವಿಲರಾದ ಎಲ್ಲರಿಗೂ ತಲಾ 200 ರಿಂದ 250 ರೂ.ವರೆಗೆ ದಂಡ ವಿಧಿಸಿದರು. 6,200 ರೂ. ಸಂಗ್ರಹವಾಯಿತು.

ರಾಜಸ್ವ ನಿರೀಕ್ಷಕ ರವಿಕುಮಾರ್, ನಗರಸಭೆ ಕಂದಾಯ ಆಧಿಕಾರಿ ಸವಿತಾ, ಆರೋಗ್ಯ ನಿರೀಕ್ಷಕ ಬಸವರಾಜು, ಮೀನಾಕ್ಷಿ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಕುರಿ, ಮೇಕೆ, ಕೋಳಿ ಮಾರಾಟ ಮಾಡುವ ಸ್ಥಳದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ. ಅಲ್ಲಿ ಕರೊನಾ ಮಾರ್ಗಸೂಚಿಯನ್ನು ಗಾಳಿಗೆ ತೂರಲಾಗಿದೆ ಎಂಬ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಅಲ್ಲಿ ಪರಿಶೀಲನೆ ನಡೆಸಲಾಯಿತು. ಮಾಸ್ಕ್ ಧರಿಸದ, ದೈಹಿಕ ಅಂತರ ಕಾಯ್ದುಕೊಳ್ಳದವರಿಗೆ ಜುಲ್ಮಾನೆ ವಿಧಿಸಲಾಯಿತು. ಜತೆಗೆ ಮಾಸ್ಕ್‌ಗಳನ್ನೂ ವಿತರಿಸಲಾಯಿತು. ಕೆ. ಮಂಜುನಾಥ್, ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net