ಕುಮಾರ್ ಬಂಗಾರಪ್ಪಗೆ ಟಿಕೆಟ್ ಕೊಟ್ಟರೆ ನಮೋ ವೇದಿಕೆ ಅಭ್ಯರ್ಥಿ ಕಣಕ್ಕೆ; ಶಾಸಕರ ವಿರುದ್ಧ ಬಂಡೇಳುವುದು ನಮಗೆ ಅನಿವಾರ್ಯ: ಪಾಣಿ ರಾಜಪ್ಪ

SOR WEEEB
Published on

ಸೊರಬ: ಶಾಸಕ ಕುಮಾರ್ ಬಂಗಾರಪ್ಪಗೆ ಬಿಜೆಪಿಯಿಂದ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಿದಲ್ಲಿ ನಮೋ ವೇದಿಕೆಯಿಂದ ಅಭ್ಯರ್ಥಿಯನ್ನು ನಿಲ್ಲಿಸುವುದು ಖಚಿತ ಎಂದು ನಮೋ ವೇದಿಕೆ ಅಧ್ಯಕ್ಷ ಪಾಣಿ ರಾಜಪ್ಪ ಹೇಳಿದರು.

ಆನವಟ್ಟಿಯಲ್ಲಿ ನಮೋ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾವ್ಯಾರೂ ಬಿಜೆಪಿ ವಿರೋಧಿಗಳಲ್ಲ. ಪಕ್ಷದ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಪಕ್ಷವನ್ನು ಕಟ್ಟುವಲ್ಲಿ ಶ್ರಮಿಸಿದವರು. ಕುಮಾರ್ ಅವರಿಂದಾಗಿ ಕಾರ್ಯಕರ್ತರಿಗೆ ಅಸ್ತಿತ್ವವೇ ಇಲ್ಲದಂತಾಗಿದೆ. ಇದರಿಂದ ರೋಸಿಹೋದ ಕಾರ್ಯಕರ್ತರು ಅನಿವಾರ್ಯವಾಗಿ ಪಕ್ಷದ ಶಾಸಕರ ವಿರುದ್ಧವೇ ಬಂಡೇಳುವಂತಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ನಮೋ ವೇದಿಕೆಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ನರೇಂದ್ರ ಮೋದಿ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ಹೆಸರಿನಲ್ಲಿ ಮತ ಯಾಚಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ನಾಮಾವಶೇಷ ಮಾಡಿ ಮತ್ತೊಂದು ರಾಷ್ಟ್ರೀಯ ಪಕ್ಷ ಬಿಜೆಪಿಗೆ ಬಂದು ಅಂಗಡಿ ತೆರೆದಿದ್ದಾರೆ. ಸರ್ಕಾರದಿಂದ ಸಾವಿರಾರು ಕೋಟಿ ರೂ. ಅನುದಾನ ತಂದಿದ್ದೇವೆ ಎಂದು ಹೇಳಿಕೊಳ್ಳುವ ಇವರಿಗೆ ತಾಲೂಕಿನಾದ್ಯಂತ ಗುಂಡಿ ತುಂಬಿರುವ ರಸ್ತೆಗಳು ಕಾಣಿಸುತ್ತಿಲ್ಲ. ಸಾರ್ವಜನಿಕರು ವಂತಿಕೆಯಿಂದ ಕಟ್ಟಿಸಿದ್ದ ಸುಸ್ಥಿತಿಯಲ್ಲಿದ್ದ ಜಯಪ್ಪ ರಂಗಮಂದಿರ ಹಾಗೂ ಶಾಲಾ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ಕಟ್ಟಲು ಹೊರಟಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.

ಕುಮಾರ್ ಬಂಗಾರಪ್ಪ ಅವರು ಯಡಿಯೂರಪ್ಪ ಮತ್ತು ಪುತ್ರ ರಾಘವೇಂದ್ರ ಅವರು ತಂದ ಅನುದಾನಗಳನ್ನು ತಮ್ಮವೆಂದು ಬಿಂಬಿಸಿಕೊಳ್ಳಲು ಬೆರಳೆಣಿಕೆಯಷ್ಟು ಹಿಂಬಾಲಕರನ್ನು ಕರೆದುಕೊಂಡು ಹೋಗಿ ನಸುಕಿನಲ್ಲಿ ಉದ್ಘಾಟಿಸುತ್ತಿದ್ದಾರೆ. ಎಸ್.ಬಂಗಾರಪ್ಪ ಮತ್ತು ಅವರ ಮಕ್ಕಳು ವಿರೋಧಿಸಿದ್ದ ದಂಡಾವತಿ ಯೋಜನೆಯನ್ನು ತಾನೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿ ಮತ್ತು ಯಡಿಯೂರಪ್ಪ ಅವರ ಹೆಸರನ್ನು ಬಳಸಿಕೊಂಡು ಶಾಸಕರಾಗಿ ಆಯ್ಕೆಯಾಗಿ ಈಗ ಅವರ ವಿರುದ್ಧವೇ ಪಿತೂರಿ ಮಾಡುತ್ತಿದ್ದಾರೆ. ಇವರ ಯಾವುದೇ ಬೆದರಿಕೆಗಳೂ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಾದ ನಮೋ ವೇದಿಕೆ ಸದಸ್ಯರು ಹೆದರುವುದಿಲ್ಲ. ಸೇಡಿನ ರಾಜಕಾರಣಕ್ಕೆ ಶಾಸಕರು ನಾಂದಿ ಹಾಡಿದ್ದು, ವಿರೋಧಿಸಿದವರನ್ನು ಪಕ್ಷದ ಹುದ್ದೆಗಳಿಂದ ತೆರವುಗೊಳಿಸಿ ತಮ್ಮ ಬಲ ಸಾಧಿಸಲು ಯತ್ನಿಸುತ್ತಿದ್ದಾರೆ. ಯಾವುದೇ ಅಡೆತಡೆ ಬಂದರೂ ನಮೋ ವೇದಿಕೆ ಇಟ್ಟುಕೊಂಡ ಗುರಿ ತಪ್ಪಿಸಲು ಶಾಸಕರಿಗೆ ಸಾಧ್ಯವೇ ಎಲ್ಲ ಎಂದು ಘೋಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net